ನವದೆಹಲಿ: ಜುಲೈ 11ರಂದು ಬಿಡುಗಡೆಯಾಗಬೇಕಿದ್ದ ‘ಉದಯಪುರ ಫೈಲ್ಸ್: ಕನ್ಹಯ್ಯ ಲಾಲ್ ಟೈಲರ್ ಮರ್ಡರ್' ಚಿತ್ರದ ಬಿಡುಗಡೆಗೆ ತಡೆ ನೀಡಿದ್ದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
‘ಉದಯಪುರ ಫೈಲ್ಸ್’ ಚಿತ್ರ ಬಿಡುಗಡೆಗೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಅನುಮತಿ ಹೊರತಾಗಿಯೂ ಚಿತ್ರದ ಬಿಡುಗಡೆಗೆ ತಡೆ ನೀಡಲಾಗಿದೆ ಎಂದು ಚಲನಚಿತ್ರ ನಿರ್ಮಾಪಕರ ಪರ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠವು ಬುಧವಾರ ಅಥವಾ ನಂತರದ ಯಾವುದೇ ದಿನದಂದು ವಿಚಾರಣೆ ನಡೆಸಲಿದೆ ಎಂದು ವರದಿಯಾಗಿದೆ.
ಜುಲೈ 10ರಂದು ‘ಉದಯಪುರ ಫೈಲ್ಸ್’ ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಆಗ್ರಹಿಸಿ ಜಮೀಯತ್ ಉಲೆಮಾ ಎ ಹಿಂದ್ ಸಂಘಟನೆ ಮತ್ತು ಪತ್ರಕರ್ತ ಪ್ರಶಾಂತ್ ಟಂಡನ್ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಆಲಿಸಿದ್ದ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ಅನೀಶ್ ದಯಾಳ್ ನೇತೃತ್ವದ ನ್ಯಾಯಪೀಠವು ಮಧ್ಯಂತರ ಆದೇಶವನ್ನು ಪ್ರಕಟಿಸಿತ್ತು.
ಚಿತ್ರ ಬಿಡುಗಡೆ ಕುರಿತು ಕೇಂದ್ರ ಸರ್ಕಾರ ನಿರ್ಧರಿಸುವವರೆಗೆ ತಡೆಯಾಜ್ಞೆ ಜಾರಿಯಲ್ಲಿರುತ್ತದೆ ಎಂದು ನ್ಯಾಯಪೀಠ ತಿಳಿಸಿತ್ತು.
‘ಕೋಮುದ್ವೇಷ ಪ್ರಚೋದಿಸಿ, ಮುಸ್ಲಿಮರನ್ನು ಅವಮಾನಕರ ರೀತಿಯಲ್ಲಿ ಚಿತ್ರಿಸಿರುವ ‘ಉದಯಪುರ ಫೈಲ್ಸ್’ ಸಿನಿಮಾವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಸಿಬಿಎಫ್‌ಸಿಗೆ ನಿರ್ದೇಶನ ನೀಡಬೇಕು. ಒಂದು ವೇಳೆ ಸಿನಿಮಾ ಬಿಡುಗಡೆಯಾದರೆ ಕೋಮು ಸಾಮರಸ್ಯ ಕದಡಬಹುದು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಗಂಭೀರ ಅಪಾಯವನ್ನುಂಟುಮಾಡಬಹುದು’ ಎಂದು ಅರ್ಜಿದಾರರು ವಾದಿಸಿದ್ದರು.
ಕನ್ಹಯ್ಯ ಲಾಲ್ ಅವರನ್ನು 2022ರ ಜೂನ್ 28ರಂದು ಅವರ ಅಂಗಡಿಯಲ್ಲಿ ಆರೋಪಿಗಳಾದ ರಿಯಾಜ್ ಅನ್ಸಾರಿ ಮತ್ತು ಗೌಸ್ ಮಹಮ್ಮದ್ ಶಿರಚ್ಛೇದ ಮಾಡಿದ್ದರು. ಪ್ರಕರಣ ಸಂಬಂಧ 7 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.