ADVERTISEMENT

ಠಾಕ್ರೆ ಹೆಸರಿಲ್ಲದೆ ಗೆದ್ದು ತೋರಿಸಿ: ಬಂಡಾಯ ಶಾಸಕರಿಗೆ ಉದ್ಧವ್ ಸವಾಲು

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 13:36 IST
Last Updated 24 ಜೂನ್ 2022, 13:36 IST
ಉದ್ಧವ್ ಠಾಕ್ರೆ: ಐಎಎನ್‌ಎಸ್ ಚಿತ್ರ
ಉದ್ಧವ್ ಠಾಕ್ರೆ: ಐಎಎನ್‌ಎಸ್ ಚಿತ್ರ   

ಮುಂಬೈ: ಬಂಡಾಯ ಶಾಸಕರಿಗೆ ತಾಕತ್ತಿದ್ದರೆ ಬಾಳಾ ಸಾಹೇಬ್ ಮತ್ತು ಶಿವಸೇನೆ ಹೆಸರು ತೆಗೆದುಕೊಳ್ಳದೆ ಜನರ ಮುಂದೆ ಹೋಗಲಿ, ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸವಾಲು ಹಾಕಿದ್ದಾರೆ ಎಂದು ಮೂಲಗಳನ್ನು ಉದ್ಧೇಶಿಸಿ ಎಎನ್‌ಐ ಟ್ವೀಟ್ ಮಾಡಿದೆ.

ಮುಂಬೈನ ಶಿವಸೇನಾ ಭವನದಲ್ಲಿ ನಡೆದ ಜಿಲ್ಲಾ ನಾಯಕರ ಸಭೆಯಲ್ಲಿ ಅವರು ವರ್ಚುವಲ್ ಆಗಿ ಮಾತನಾಡಿದರು.

‘ನನಗೆ ಅಧಿಕಾರದ ದುರಾಸೆ ಇಲ್ಲ. ಬೇಕಾದರೆ ಸಾಯುತ್ತೇವೆ, ಆದರೆ, ಶಿವಸೇನೆ ಪಕ್ಷ ಬಿಡುವುದಿಲ್ಲ ಎಂದು ಹೇಳುತ್ತಿದ್ದ ಶಾಸಕರು ಇವತ್ತು ಓಡಿ ಹೋಗಿದ್ದಾರೆ. ಬಂಡಾಯ ಶಾಸಕರು ಶಿವಸೇನೆಯನ್ನು ಒಡೆಯುವ ಇಚ್ಛೆ ಹೊಂದಿದ್ದಾರೆ. ಅವರಿಗೆ ತಾಕತ್ತಿದ್ದರೆ ಬಾಳಾ ಠಾಕ್ರೆ ಮತ್ತು ಶಿವಸೇನೆ ಹೆಸರು ತೆಗೆದುಕೊಳ್ಳದೆ ಜನರ ಬಳಿಗೆ ಹೋಗಲಿ’ ಎಂದು ಠಾಕ್ರೆ ಸವಾಲು ಹಾಕಿದ್ದಾರೆ.

ADVERTISEMENT

‘ಏಕನಾಥ್ ಶಿಂಧೆ ಅವರ ಮಗ ಶಿವಸೇನೆಯ ಸಂಸದ. ಅವರಿಗಾಗಿ ನಾನು ಎಲ್ಲವನ್ನೂ ಮಾಡಿದ್ದೇನೆ. ನನ್ನ ಕೈಯಲ್ಲಿದ್ದ ಇಲಾಖೆಯನ್ನು ಶಿಂಧೆಗೆ ಕೊಟ್ಟಿದ್ದೇನೆ. ಆದರೂ ಅವರು ನನ್ನ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ’ ಎಂದು ಉದ್ಧವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

ನನಗೆ ಆರೋಗ್ಯ ಸರಿ ಇಲ್ಲ. ಕುತ್ತಿಗೆ ಮತ್ತು ತಲೆ ನೋವಿದೆ. ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕಣ್ಣು ತೆರೆಯಲು ಆಗುತ್ತಿಲ್ಲ. ಅವೆಲ್ಲವನ್ನೂ ಕಡೆಗಣಿಸಿ ಸಭೆಗೆ ಬಂದಿದ್ದೇನೆ ಎಂದು ಉದ್ಧವ್ ಹೇಳಿದ್ದಾರೆ.

ಶಿವಾಜಿ ಮಹಾರಾಜರನ್ನು ಸೋಲಿಸಲಾಗಿತ್ತು. ಆದರೆ, ಜನರು ಅವರ ಜೊತೆಗಿದ್ದರು ಎಂದು ಠಾಕ್ರೆ ಹೇಳಿದ್ದಾರೆ.

ಮಹಾ ವಿಕಾಸ್ ಅಘಾಡಿ ನೇತೃತ್ವದಸರ್ಕಾರದ ವಿರುದ್ಧ ಬಂಡೆದ್ದಿರುವ ಸಚಿವ ಏಕನಾಥ್ ಶಿಂಧೆ ಸುಮಾರು 40 ಶಾಸಕರ ಜೊತೆ ಗುವಾಹಟಿಯಲ್ಲಿ ಬೀಡು ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.