ADVERTISEMENT

ಆಧಾರ್‌: ವಿಳಾಸ ನವೀಕರಣಕ್ಕೆ ಹೊಸ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 16:15 IST
Last Updated 3 ಜನವರಿ 2023, 16:15 IST

ನವದೆಹಲಿ: ‘ಕುಟುಂಬದ ಮುಖ್ಯಸ್ಥರ ಒಪ್ಪಿಗೆ ಮೇರೆಗೆ ಆನ್‌ಲೈನ್‌ ಮೂಲಕ ಆಧಾರ್‌ ವಿಳಾಸ ನವೀಕರಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ’ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಮಂಗಳವಾರ ತಿಳಿಸಿದೆ.

‘ತಮ್ಮ ಹೆಸರಿನಲ್ಲಿ ಯಾವುದೇ ದಾಖಲೆ ಹೊಂದಿರದೇ ಇರುವವರಿಗೆ ಹಾಗೂ ಬೇರೆ ಬೇರೆ ಕಾರಣಗಳಿಗಾಗಿ ದೇಶದ ವಿವಿಧ ನಗರ ಅಥವಾ ಪಟ್ಟಣಗಳಿಗೆ ವಲಸೆ ಹೋಗುವ ಲಕ್ಷಾಂತರ ಮಂದಿಗೆ ನೂತನ ವ್ಯವಸ್ಥೆಯಿಂದಾಗಿ ಹೆಚ್ಚು ಅನುಕೂಲವಾಗಲಿದೆ’ ಎಂದು ಹೇಳಿದೆ.

‘ವಿಳಾಸ ನವೀಕರಿಸಲು ಇಚ್ಛಿಸುವವರು ಕುಟುಂಬದ ಮುಖ್ಯಸ್ಥರೊಂದಿಗೆ ತಾವು ಹೊಂದಿರುವ ಸಂಬಂಧ ದೃಢೀಕರಿಸಲು ಅಗತ್ಯವಿರುವ ಪಡಿತರ ಚೀಟಿ, ವಿವಾಹ ನೋಂದಣಿ ಪ್ರಮಾಣಪತ್ರ, ಪಾಸ್‌ಪೋರ್ಟ್‌ ಅಥವಾ ಇತರೆ ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿದಾರರು ತಮ್ಮ ಹೆಸರಿನ ಜೊತೆಗೆ ಕುಟುಂಬದ ಮುಖ್ಯಸ್ಥರ ಹೆಸರನ್ನೂ ಆನ್‌ಲೈನ್‌ನಲ್ಲಿ ನಮೂದಿಸಬೇಕು. ಅದಾದ ಬಳಿಕ ಮುಖ್ಯಸ್ಥರ ಮೊಬೈಲ್‌ಗೆ ಒಟಿಪಿ ರವಾನೆಯಾಗಲಿದೆ. ಅದನ್ನು ಮುಖ್ಯಸ್ಥರು ದೃಢೀಕರಿಸಿದರೆ ವಿಳಾಸ ನವೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ಉದ್ದೇಶಕ್ಕಾಗಿ 18 ವರ್ಷ ಮೇಲ್ಪಟ್ಟ ಯಾರನ್ನಾದರೂ ಕುಟುಂಬದ ಮುಖ್ಯಸ್ಥರನ್ನಾಗಿ ಪರಿಗಣಿಸಬಹುದು’ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.