ನವದೆಹಲಿ: ‘ನ್ಯಾಯದ ಕುಣಿಕೆಯಿಂದ ತಪ್ಪಿಸಿಕೊಂಡವರಿಗೆ ಆಶ್ರಯ ಕಲ್ಪಿಸುವ ಯಾವುದೇ ಉದ್ದೇಶ ಬ್ರಿಟನ್ ಸರ್ಕಾರಕ್ಕೆ ಇಲ್ಲ’ ಎಂದು ಬ್ರಿಟನ್ ಭದ್ರತಾ ಸಚಿವ ಟಾಮ್ ಟುಗೆಂಧಟ್ ಸ್ಪಷ್ಟಪಡಿಸಿದ್ದಾರೆ.
ಕೋಟ್ಯಂತರ ರೂಪಾಯಿ ವಂಚನೆ ಎಸಗಿ ಬ್ರಿಟನ್‌ಗೆ ಪಲಾಯನಗೈದಿರುವ ಉದ್ಯಮಿ ವಿಜಯ್ ಮಲ್ಯ ಹಾಗೂ ವಜ್ರದ ವ್ಯಾಪಾರಿ ನೀರವ್ ಮೋದಿ ಅವರನ್ನು ಹಸ್ತಾಂತರಿಸುವಂತೆ ಭಾರತ ಒತ್ತಡ ಹೇರುತ್ತಿರುವ ಬೆನ್ನಲ್ಲೇ ಸಚಿವ ಟಾಮ್ ಅವರು ನೀಡಿರುವ ಈ ಹೇಳಿಕೆಯು ಮಹತ್ವ ಪಡೆದಿದೆ.
‘ಉದ್ಯಮಿಗಳ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನು ಪ್ರಕ್ರಿಯೆಗಳನ್ನು ಪಾಲಿಸಬೇಕಿದೆ. ನಾವಿಬ್ಬರೂ (ಯು.ಕೆ ಮತ್ತು ಭಾರತ) ಇದೇ ಹಾದಿಯಲ್ಲಿ ಸಾಗಬೇಕಿದೆ. ಸರ್ಕಾರವು ಆರ್ಥಿಕ ಅಪರಾಧಿಗಳಿಗೆ ಬ್ರಿಟನ್‌ನಲ್ಲಿ ನೆಲೆಯೂರಲು ಅವಕಾಶ ಕಲ್ಪಿಸುವ ಇಚ್ಛೆ ಹೊಂದಿಲ್ಲ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ. ಆದರೆ, ಅವರು ಮಲ್ಯ ಹಾಗೂ ನೀರವ್ ಮೋದಿ ವಿರುದ್ಧದ ಯಾವುದೇ ನಿರ್ದಿಷ್ಟ ಪ್ರಕರಣಗಳನ್ನು ಉಲ್ಲೇಖಿಸಲಿಲ್ಲ.
ಹೈಕಮಿಷನ್ ಕಚೇರಿಗೆ ಭದ್ರತೆ: ‘ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಹಾಗೂ ಅದರ ಸಿಬ್ಬಂದಿಯ ಸುರಕ್ಷತೆ ಹಾಗೂ ಭದ್ರತೆಗೆ ಬ್ರಿಟನ್ ಸರ್ಕಾರ ಅಗತ್ಯ ಕ್ರಮಕೈಗೊಳ್ಳಲಿದೆ’ ಎಂದು ಸಚಿವ ಟಾಮ್ ಭರವಸೆ ನೀಡಿದ್ದಾರೆ.
ಭಾರತೀಯ ಹೈಕಮಿಷನ್ ಕಚೇರಿಗೆ ಮೇಲೆ ಐದು ತಿಂಗಳ ಹಿಂದೆ ಖಾಲಿಸ್ತಾನ ಪರ ಹೋರಾಟಗಾರರು ನಡೆಸಿದ ದಾಳಿಯು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯದ ಮೇಲೆ ಗಂಭೀರ ಪರಿಣಾಮ ಬೀರಿತ್ತು.
‘ಬ್ರಿಟನ್‌ನಲ್ಲಿ ತೀವ್ರಗಾಮಿ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳಲಾಗುತ್ತದೆ. ಈ ಬಗ್ಗೆ ಭಾರತಕ್ಕೂ ಮನವರಿಕೆ ಮಾಡಿಕೊಡಲಾಗಿದೆ’ ಎಂದಿದ್ದಾರೆ.
‘ಬ್ರಿಟನ್‌ನಲ್ಲಿ ನಡೆದ ಈ ಘಟನೆಯು ಭಾರತದ ಸಮಸ್ಯೆಯಲ್ಲ. ಬ್ರಿಟನ್ ಪ್ರಜೆಗಳು ಈ ವರ್ತನೆ ತೋರಿದ್ದಾರೆ. ಹಾಗಾಗಿ, ಇದು ನಮ್ಮ ದೇಶದ ಸಮಸ್ಯೆಯಾಗಿದೆ. ದೇಶದ ಪ್ರಜೆಗಳಿಂದಲೇ ಇಂತಹ ತೀವ್ರಗಾಮಿ ಚಟುವಟಿಕೆ ನಡೆದರೆ ಅದರ ನಿಗ್ರಹಕ್ಕೆ ಬ್ರಿಟಿಷ್ ಸರ್ಕಾರವೇ ನೇರವಾಗಿ ಕ್ರಮಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.