ADVERTISEMENT

ಬ್ರಿಟನ್‌ | ಮಹಾರಾಜ ದುಲೀಪ್‌ ಸಿಂಗ್‌ ಕುರಿತ ವಸ್ತುಪ್ರದರ್ಶನ

ಪಿಟಿಐ
Published 28 ಜನವರಿ 2024, 14:08 IST
Last Updated 28 ಜನವರಿ 2024, 14:08 IST
<div class="paragraphs"><p>ಮಹಾರಾಜ ದುಲೀಪ್‌ ಸಿಂಗ್‌</p></div>

ಮಹಾರಾಜ ದುಲೀಪ್‌ ಸಿಂಗ್‌

   

ಚಿತ್ರ:Wikipedia

ಲಂಡನ್‌: ಸಿಖ್‌ ಸಂಸ್ಥಾನದ ಕೊನೆಯ ಆಡಳಿತಗಾರ ಮಹಾರಾಜ ದುಲೀಪ್‌ ಸಿಂಗ್‌ ಅವರ ಮನೆತನದ ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಬ್ರಿಟನ್‌ನ ಥೆಟ್‌ಫೋರ್ಡ್‌ ವಸ್ತುಸಂಗ್ರಹಾಲಯವು ವಸ್ತುಪ್ರದರ್ಶನ ಏರ್ಪಡಿಸಲಿದೆ. ಇದಕ್ಕಾಗಿ ಅಲ್ಲಿಯ ನ್ಯಾಷನಲ್‌ ಲಾಟರಿ ಹೆರಿಟೇಜ್‌ ಫಂಡ್‌ ₹ 2.1 ಕೋಟಿ ಧನಸಹಾಯವನ್ನು ನೀಡಿದೆ.

ADVERTISEMENT

ನಾರ್ಫೋಕ್‌ನಲ್ಲಿರುವ ಈ ಸಂಗ್ರಹಾಲಯವನ್ನು ಮಹಾರಾಜ ದುಲೀಪ್‌ ಸಿಂಗ್ ಅವರ ಮಗ ರಾಜಕುಮಾರ ಫ್ರೆಡರಿಕ್ ದುಲೀಪ್‌ ಸಿಂಗ್ ಅವರು 1924ರಲ್ಲಿ ನಿರ್ಮಿಸಿದ್ದರು. ಬಳಿಕ ಇದನ್ನು ಥೆಟ್‌ಫೋರ್ಡ್‌ ಪಟ್ಟಣದ ಜನರಿಗೆ ಕೊಡುಗೆಯನ್ನಾಗಿ ನೀಡಿದ್ದರು. ಸಂಗ್ರಹಾಲಯದ ಶತಮಾನೋತ್ಸವದ ಅಂಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ದುಲೀಪ್‌ ಸಿಂಗ್‌ ಅವರ ಕುಟುಂಬದ ಕುತೂಹಲಕರ ಇತಿಹಾಸವನ್ನು ವಸ್ತುಸಂಗ್ರಹಾಲಯವು ಜನರೆದುರು ತೆರೆದಿಡಲಿದೆ. ಇದು ಎರಡು ವರ್ಷಗಳ ಕಾರ್ಯಕ್ರಮವಾಗಿದೆ ಎಂದು ನ್ಯಾಷನಲ್‌ ಲಾಟರಿ ಹೆರಿಟೇಜ್‌ ಫಂಡ್‌ನ ನಿರ್ದೇಶಕರು ತಿಳಿಸಿದ್ದಾರೆ.

ಆಂಗ್ಲೊ– ಪಂಜಾಬ್‌ ಇತಿಹಾಸ ಸಾರುವ ವೈಭವೋಪೇತವಾದ ಬಂಗಲೆಗಳು ಮತ್ತು ಎಲ್ವೆಡೆನ್‌ ಹಾಲ್‌ನ ಮಾದರಿ, ದುಲೀಪ್ ಸಿಂಗ್‌ ಅವರ ವರ್ಣಚಿತ್ರ, ವಯಸ್ಕರ ಮತದಾನದ ಹಕ್ಕನ್ನು ಸಾರ್ವತ್ರಿಕಗೊಳಿಸುವಲ್ಲಿ ಅವರ ಕುಟುಂಬ ನೀಡಿರುವ ಕೊಡುಗೆಗಳ ಕುರಿತ ವಸ್ತು ಪ್ರದರ್ಶನಗಳು ನಡೆಯಲಿವೆ. ಇದೆಲ್ಲದರ ಜೊತೆಗೆ, ರಾಜ ಏಳನೇ ಎಡ್ವರ್ಡ್‌ ಅವರು ದುಲೀಪ್‌ ಸಿಂಗ್‌ಗೆ ಉಡುಗೊರೆಯಾಗಿ ನೀಡಿದ್ದ ಊರುಗೋಲು ಹಾಗೂ ದುಲೀಪ್‌ ಕುಟುಂಬ ಸದಸ್ಯರು ಬಳಿಸಿದ್ದ ವಸ್ತುಗಳ ಪ್ರದರ್ಶನವೂ ಇರಲಿದೆ ನಾರ್ಫೋಕ್‌ ಕೌಂಟಿ ಕೌನ್ಸಿಲ್‌ ತಿಳಿಸಿದೆ. 

ಈ ಕಾರ್ಯಕ್ರಮಕ್ಕೆ ಥೆಟ್‌ಫೋರ್ಡ್‌ ಟೌನ್‌ ಕೌನ್ಸಿಲ್‌ ಕಮ್ಯೂನಿಟಿ ಗ್ರಾಂಟ್, ಫ್ರೆಂಡ್ಸ್‌ ಆಫ್‌ ಥೆಟ್‌ಫೋರ್ಡ್‌ ಮ್ಯೂಸಿಯಂ ಸೇರಿ ಇನ್ನೂ ಕೆಲವು ಸಂಸ್ಥೆಗಳು ಸಹಾಯಧನ ನೀಡುತ್ತವೆ.

ದುಲೀಪ್‌ ಸಿಂಗ್‌ ಹಿನ್ನೆಲೆ

ಸಿಖ್‌ ಸಂಸ್ಥಾನದ ಸಂಸ್ಥಾಪಕ ಮಹಾರಾಜ ರಂಜಿತ್‌ ಸಿಂಗ್‌ ಅವರ ಕಿರಿ ಮಗ ಮಹಾರಾಜ ದುಲೀಪ್‌ ಸಿಂಗ್‌. ತಂದೆಯ ನಿಧನದ ನಂತರ ದುಲೀಪ್‌ ತಮ್ಮ ಐದನೇ ವಯಸ್ಸಿನಲ್ಲೇ ಮಹಾರಾಜರಾಗಿ ಪಟ್ಟಕ್ಕೇರುತ್ತಾರೆ. ಪಂಜಾಬ್‌ಅನ್ನು ಬ್ರಿಟಿಷರು 1849ರಲ್ಲಿ ವಶಕ್ಕೆ ತೆಗೆದುಕೊಂಡ ಬಳಿಕ ದುಲೀಪ್‌ ಬ್ರಿಟನ್‌ಗೆ ತೆರಳಿ, ಸಫೋಲ್ಕ್‌ನ ಎಲ್ವೆಡೆನ್‌ ಹಾಲ್‌ನಲ್ಲಿ ನೆಲೆಸುತ್ತಾರೆ. ಅವರ ಕುಟುಂಬ ಶತಮಾನಗಳ ಕಾಲ ಅಲ್ಲಿಯೇ ನೆಲೆಸುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.