ADVERTISEMENT

ದೆಹಲಿಯ ಅನಧಿಕೃತ ಕಾಲೊನಿಗಳ 40 ಲಕ್ಷ ಮಂದಿಗೆ ಒಡೆತನದ ಹಕ್ಕು: ಕೇಂದ್ರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 12:12 IST
Last Updated 23 ಅಕ್ಟೋಬರ್ 2019, 12:12 IST
ಕೇಂದ್ರ ಸಚಿವರ ಮಾಧ್ಯಮಗೋಷ್ಠಿ
ಕೇಂದ್ರ ಸಚಿವರ ಮಾಧ್ಯಮಗೋಷ್ಠಿ   

ನವದೆಹಲಿ: ದೆಹಲಿಯ ಅನಧಿಕೃತ ಕಾಲೊನಿಗಳಲ್ಲಿ ವಾಸಿಸುತ್ತಿರುವ 40 ಲಕ್ಷ ಜನರಿಗೆ ಒಡೆತನದ ಹಕ್ಕು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಬುಧವಾರ ಸಭೆ ಸೇರಿ ಈ ನಿರ್ಧಾರ ಕೈಗೊಂಡಿದೆ.

ಈ ಕಾಲೊನಿಗಳಲ್ಲಿ ವಾಸಿಸುವರಿಗೆ ಒಡೆತನದ ಹಕ್ಕನ್ನು ನೀಡುವ ಮಹತ್ವದ ನಿರ್ಧಾರವನ್ನು ನಾವು ಕೈಗೊಂಡಿದ್ದು, ಇದು ಐತಿಹಾಸಿಕ ನಿರ್ಧಾರ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಇದು ದೂರದೃಷ್ಟಿ ಹೊಂದಿದ ಕ್ರಾಂತಿಕಾರಿ ನಿರ್ಧಾರ ಎಂದು ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಸಭೆಯ ನಂತರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, 1,797 ಅನಧಿಕೃತ ಕಾಲೊನಿಗಳಲ್ಲಿ ವಾಸವಿರುವ ಕಡಿಮೆ ಆದಾಯ ಹೊಂದಿರುವ ಸಮುದಾಯದ ಜನರಿಗೆ ಈ ನಿರ್ಧಾರ ಅನ್ವಯವಾಗಲಿದೆ. ಇದು ಡಿಡಿಎ, ಸೈನಿಕ್ ಫಾರ್ಮ್ಸ್, ಮಹೇಂದ್ರು ಎನ್‌ಕ್ಲೇವ್ ಮತ್ತು ಅನಂತ್ ರಾಮ್ ಡೈರಿಯಲ್ಲಿರುವ 69 ಸಮೃದ್ಧ ಕಾಲೊನಿಗಳಲ್ಲಿರುವವರಿಗೆ ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಮನೆ ನಿರ್ಮಾಣಕ್ಕಿರುವ ಜಮೀನು ಮತ್ತು ಜಮೀನಿನ ಗಾತ್ರಕ್ಕೆ ತಕ್ಕ ನ್ಯಾಯಬೆಲೆ ನೀಡಿದರೆ ಅವರಿಗೆ ಜಮೀನಿನ ಒಡೆತನದ ಹಕ್ಕು ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ. ಅನಧಿಕೃತ ಕಾಲೊನಿಗಳ ಪಕ್ಕದಲ್ಲಿರುವ ವಾಸದ ಮನೆಗಳ ಪ್ರದೇಶದಲ್ಲಿನ ಜಮೀನು ಬೆಲೆಯನ್ನಾಧರಿಸಿ ಸರ್ಕಾರಿ ಜಮೀನಿನಲ್ಲಿರುವ ಕಾಲೊನಿಗಳ ಜಮೀನು ಬೆಲೆ ಶೇ.0.5 ( 100 ಚದರ ಮೀಟರ್‌ಗಿಂತ ಕಡಿಮೆ) ಶೇ. 1(100- 250 ಚ.ಮೀ) ಮತ್ತು ಶೇ. 2.5(250 ಚ.ಮೀಗಿಂತ ಜಾಸ್ತಿ) ರಷ್ಟು ಈ ಜಮೀನಿನಬೆಲೆ ಇರಲಿದೆ.

ಖಾಸಗಿ ಜಮೀನಿನಲ್ಲಿರುವ ಕಾಲೊನಿಯವರಿಗೆ ಸರ್ಕಾರಿ ಜಾಗದ ಬೆಲೆಯ ಅರ್ಧದಷ್ಟು ಬೆಲೆಗೆ ಜಮೀನುನೀಡಲಾಗುವುದು.ದೆಹಲಿಯ ಅನಧಿಕೃತ ಕಾಲೊನಿಯಲ್ಲಿ ವಾಸಿಸುವವರಿಗೆ ಒಡೆತನದ ಹಕ್ಕಿ ನೀಡಲಾಗುವುದು ಎಂದು ಜುಲೈ ತಿಂಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.