ADVERTISEMENT

ಒಂದು ದೇಶ, ಒಂದು ಕಾನೂನು ಅಗತ್ಯ: ಏಕರೂಪ ನಾಗರಿಕ ಸಂಹಿತೆ ಪರ ನಖ್ವಿ ಹೇಳಿಕೆ

ಪಿಟಿಐ
Published 26 ನವೆಂಬರ್ 2025, 15:37 IST
Last Updated 26 ನವೆಂಬರ್ 2025, 15:37 IST
ಮುಖ್ತಾರ್ ಅಬ್ಬಾಸ್ ನಖ್ವಿ
ಮುಖ್ತಾರ್ ಅಬ್ಬಾಸ್ ನಖ್ವಿ   

ನವದೆಹಲಿ: ‘ಒಂದು ದೇಶ, ಒಂದು ಕಾನೂನು ಇಂದಿನ ಅತ್ಯಗತ್ಯವಾಗಿದೆ’ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿಯ ಹಿರಿಯ ಮುಖಂಡ ಮುಖ್ತಾರ್ ಅಬ್ಬಾಸ್‌ ನಖ್ವಿ ಬುಧವಾರ ಇಲ್ಲಿ ಪ್ರತಿಪಾದಿಸಿದರು.

‘ಏಕರೂಪ ನಾಗರಿಕ ಸಂಹಿತೆಯು ಇಡೀ ದೇಶಕ್ಕೆ ಅನ್ವಯವಾಗುವಂಥದ್ದು. ಇದು ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ’ ಎಂದರು.

ಸಂವಿಧಾನ ದಿನದ ಅಂಗವಾಗಿ ಭಾರತ್ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಖ್ವಿ, ‘ಸಂವಿಧಾನದ ಬಲವರ್ಧನೆಗೆ ಏಕರೂಪ ನಾಗರಿಕ ಸಂಹಿತೆ ಅನಿವಾರ್ಯವಾಗಿದೆ’ ಎಂದು ಹೇಳಿದರು.

ADVERTISEMENT

‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂವಿಧಾನದ ನಿರ್ದೇಶಕ ತತ್ವಗಳನ್ನು ಅಳವಡಿಸಿಕೊಳ್ಳಲು ಏಕರೂಪ ನಾಗರಿಕ ಸಂಹಿತೆಯು ಅವಕಾಶ ಒದಗಿಸಲಿದೆ’ ಎಂದರು.

‘ಬಹುಸಂಖ್ಯಾತ ಸಮುದಾಯದ ಒಳಗೊಳ್ಳುವಿಕೆ, ಸಹಬಾಳ್ವೆ ಮತ್ತು ಸಹಿಷ್ಣುತೆಯ ಪರಿಣಾಮದಿಂದಾಗಿ ದೇಶದಲ್ಲಿ ಜಾತ್ಯತೀತತೆ ರೂಪುಗೊಂಡಿದೆ’ ಎಂದು ತಿಳಿಸಿದರು.

‘ದೇಶ ವಿಭಜನೆಯ ನಂತರ, ಭಾರತದ ಹಿಂದೂ ಬಹುಸಂಖ್ಯಾತ ಸಮುದಾಯವು ಜಾತ್ಯತೀತತೆಯ ಹಾದಿಯನ್ನು ಆಯ್ಕೆ ಮಾಡಿಕೊಂಡರೆ, ಪಾಕಿಸ್ತಾನದ ಮುಸ್ಲಿಂ ಬಹುಸಂಖ್ಯಾತರು ಇಸ್ಲಾಮಿಕ್ ರಾಷ್ಟ್ರದ ಧ್ವಜ ಆರೋಹಣ ಮಾಡಿದರು’ ಎಂದು ನಖ್ವಿ ಹೇಳಿದರು.

‘ಭಾರತದ ಸಂವಿಧಾನವು ಅಂಗೀಕಾರಗೊಂಡ ದಿನದಿಂದ ಇಂದಿನವರೆಗೂ ತನ್ನ ಆಶಯವನ್ನು ಉಳಿಸಿಕೊಂಡಿದೆ. ಸುರಕ್ಷಿತವಾಗಿದೆ. ಆದರೆ, ಪಾಕಿಸ್ತಾನದ ಸಂವಿಧಾನವು 1956, 1969ರಲ್ಲಿ ಅಮಾನತುಗೊಂಡಿತು. ರದ್ದಾದ ಬಳಿಕ ಹೊಸ ಸಂವಿಧಾನ ಜಾರಿಗೆ ಬಂದಿತು’ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಕೇಂದ್ರದ ಮಾಜಿ ಸಚಿವರು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.