ADVERTISEMENT

Union Budget 2021: ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ನಿರ್ಮಾಣಕ್ಕೆ ಚಾಲನೆ

ಹೆದ್ದಾರಿ ವಲಯಕ್ಕೆ ಅತಿ ಹೆಚ್ಚಿನ ಅನುದಾನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 18:44 IST
Last Updated 1 ಫೆಬ್ರುವರಿ 2021, 18:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಹೆದ್ದಾರಿ ವಲಯಕ್ಕೆ ಬಜೆಟ್‌ನಲ್ಲಿ ಈ ಬಾರಿ ಅತಿ ಹೆಚ್ಚಿನ ಅನುದಾನ ನಿಗದಿಪಡಿಸಲಾಗಿದ್ದು, ಬೆಂಗಳೂರು – ಚೆನ್ನೈ ಸೇರಿದಂತೆ ಎಂಟು ಎಕ್ಸ್‌ಪ್ರೆಸ್‌ ವೇಗಳ ನಿರ್ಮಾಣ ಕಾರ್ಯ 2021–22ರಲ್ಲಿ ಆರಂಭವಾಗಲಿದೆ ಎಂದು ಪ್ರಸ್ತಾಪಿಸಲಾಗಿದೆ.

2021–22ನೇ ಸಾಲಿಗೆ ₹1.18 ಲಕ್ಷ ಕೋಟಿ ಮೊತ್ತವನ್ನು ನಿಗದಿಪಡಿಸಲಾಗಿದ್ದು, ಹೆದ್ದಾರಿಗಳ ನಿರ್ಮಾಣ ಕಾರ್ಯವನ್ನು ತ್ವರಿಗತಿಯಲ್ಲಿ ಕೈಗೊಳ್ಳಲು ಆದ್ಯತೆ ನೀಡಲಾಗುವುದು ಎಂದು ಉಲ್ಲೇಖಿಸಲಾಗಿದೆ.

‘ಪ್ರಸಕ್ತ ಹಣಕಾಸು ವರ್ಷದಲ್ಲಿ 278 ಕಿಲೋ ಮೀಟರ್‌ ಉದ್ದದ ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

2011ರಲ್ಲೇ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಎಕ್ಸ್‌ಪ್ರೆಸ್‌ ವೇ ನಿರ್ಮಾಣದಿಂದ ಬೆಂಗಳೂರು ಮತ್ತು ಚೆನ್ನೈ ನಗರಗಳ ನಡುವಿನ ಸಂಚಾರದ ಅವಧಿ ನಾಲ್ಕು ಗಂಟೆಯಷ್ಟು ಕಡಿಮೆಯಾಗುತ್ತದೆ.

ಈ ಮಾರ್ಗವು ಕರ್ನಾಟಕ, ಆಂಧ್ರಪ್ರದೇಶ ಮೂಲಕ ತಮಿಳುನಾಡಿಗೆ ಸಾಗುತ್ತದೆ. ಹೊಸಕೋಟೆಯಿಂದ ಆರಂಭವಾಗುವ ಈ ಮಾರ್ಗವು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಮುಕ್ತಾಯವಾಗುತ್ತದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಿದೆ. ಆರು ಪಥಗಳ ಈ ಎಕ್ಸ್‌ಪ್ರೆಸ್‌ವೇಯನ್ನು ಸುಮಾರು ₹20 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

277 ಕಿಲೋ ಮೀಟರ್‌ ಉದ್ದದ ಚೆನ್ನೈ–ಸೇಲಂ ಕಾರಿಡಾರ್‌ ಮತ್ತು 464 ಕಿಲೋ ಮೀಟರ್ ಉದ್ದದ ರಾಯಪುರ–ವಿಶಾಖಪಟ್ಟಣ ಎಕ್ಸ್‌ಪ್ರೆಸ್‌ ವೇ ನಿರ್ಮಾಣ ಕಾರ್ಯವೂ 2021–22ರಲ್ಲಿ ಆರಂಭವಾಗಲಿದೆ. ಅತ್ಯಾಧುನಿಕ ಸಂಚಾರ ನಿರ್ವಹಣೆ ವ್ಯವಸ್ಥೆಯನ್ನು ಈ ಮಾರ್ಗಗಳು ಒಳಗೊಂಡಿವೆ.

2020–21ನೇ ಸಾಲಿನಲ್ಲಿ ಹೆದ್ದಾರಿಗಳಿಗೆ 91,823 ಕೋಟಿ ಹಂಚಿಕೆಯಾಗಿತ್ತು. ನಂತರ ₹1.01 ಲಕ್ಷ ಕೋಟಿಗೆ ಪರಿಷ್ಕರಣೆ ಮಾಡಲಾಗಿತ್ತು.

₹5.35 ಲಕ್ಷ ಕೋಟಿ ಮೊತ್ತದ ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ₹3.3 ಲಕ್ಷ ಕೋಟಿ ವೆಚ್ಚದಲ್ಲಿ 13 ಸಾವಿರ ಕಿಲೋ ಮೀಟರ್‌ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಇದರಲ್ಲಿ ಈಗಾಗಲೇ 3,800 ಕಿಲೋ ಮೀಟರ್‌ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.

‘2022ರ ಮಾರ್ಚ್‌ ವೇಳೆಗೆ ಮತ್ತೆ 8,500 ಕಿಲೋ ಮೀಟರ್‌ ಉದ್ದದ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಜತೆಗೆ, 11,000 ಕಿಲೋ ಮೀಟರ್‌ ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೂ ಮುಕ್ತಾಯಗೊಳ್ಳಲಿದೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.