ADVERTISEMENT

ಇಸ್ರೊ ಸಾಧನೆಗೆ ಪ್ರಶಂಸೆ: ಕೇಂದ್ರ ಸಚಿವ ಸಂಪುಟ ನಿರ್ಣಯ ಅಂಗೀಕಾರ

ಪಿಟಿಐ
Published 29 ಆಗಸ್ಟ್ 2023, 16:16 IST
Last Updated 29 ಆಗಸ್ಟ್ 2023, 16:16 IST
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್   

ನವದೆಹಲಿ: ಮಹತ್ವಾಕಾಂಕ್ಷೆಯ ‘ಚಂದ್ರಯಾನ–3’ರ ನೌಕೆಯ ಲ್ಯಾಂಡರ್‌ ಮತ್ತು ರೋವರ್ ಅನ್ನು ಚಂದ್ರನ ದಕ್ಷಿಣ ಧ್ರುವದ ಅಂಗಳದಲ್ಲಿ ಇಸ್ರೊ ಯಶಸ್ವಿಯಾಗಿ ಇಳಿಸಿದ್ದನ್ನು (ಸಾಫ್ಟ್‌ ಲ್ಯಾಂಡಿಂಗ್) ಶ್ಲಾಘಿಸುವ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಗಿದೆ.

‘ಈ ಬಾಹ್ಯಾಕಾಶ ಕಾರ್ಯಕ್ರಮವು ಇಸ್ರೊದ ಯಶಸ್ಸು ಮಾತ್ರವಲ್ಲ, ಭಾರತದ ಪ್ರಗತಿ ಹಾಗೂ ಜಾಗತಿಕ ವೇದಿಕೆಯಲ್ಲಿ ದೇಶದ ಸ್ಥಾನ ಉನ್ನತ ಮಟ್ಟಕ್ಕೆ ಏರಿರುವುದರ ಸಂಕೇತವೂ ಆಗಿದೆ’ ಎಂದು ಸಂಪುಟ ಸಭೆಯು ಹರ್ಷ ವ್ಯಕ್ತಪಡಿಸಿದೆ.

‘ಆಗಸ್ಟ್‌ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂಬುದಾಗಿ ಆಚರಿಸುವ ನಿರ್ಧಾರವನ್ನು ಸಹ ಸಭೆ ಸ್ವಾಗತಿಸಿತು’ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಸಭೆ ಬಳಿಕೆ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಚಂದ್ರಯಾನ–3ರ ಯಶಸ್ಸಿಗಾಗಿ ಇಸ್ರೊವನ್ನು ಅಭಿನಂದಿಸಿದ ಸಚಿವ ಸಂಪುಟ, ಈ ಸಾಧನೆಗಾಗಿ ಸಂಸ್ಥೆಯ ವಿಜ್ಞಾನಿಗಳಿಗೆ ಧನ್ಯವಾದ ಅರ್ಪಿಸಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಅತ್ಯಂತ ನಿಖರವಾಗಿ ಲ್ಯಾಂಡರ್‌ ಘಟಕವನ್ನು (ವಿಕ್ರಮ್) ಇಳಿಸಿದ್ದು ಮಹತ್ವದ ಸಾಧನೆ ಎಂಬುದಾಗಿ ಸಭೆ ಬಣ್ಣಿಸಿತು’ ಎಂದು ಸಚಿವ ಠಾಕೂರ್‌ ಹೇಳಿದರು.

‘ಈ ಐತಿಹಾಸಿಕ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಕೊಡುಗೆಯನ್ನು ಪ್ರಶಂಸಿಸಿದ ಸಚಿವ ಸಂಪುಟವು, ಸತತ ಪ್ರಯತ್ನ, ಉತ್ಸಾಹ ಹಾಗೂ ನಿಷ್ಠೆಯಿಂದ ಭಾರತ ಏನು ಸಾಧಿಸಬಲ್ಲದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂಬ ನಿರ್ಣಯವನ್ನೂ ಅಂಗೀಕರಿಸಲಾಗಿದೆ’ ಎಂದರು.

‘ದೂರದರ್ಶಿತ್ವ ಹಾಗೂ ಅನುಕರಣೀಯ ನಾಯಕತ್ವಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಸಭೆ ಅಭಿನಂದಿಸಿತು’ ಎಂದು ಠಾಕೂರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.