ADVERTISEMENT

ದೇಶದಲ್ಲಿ ಸೋಂಕಿತರ ಸಂಖ್ಯೆ 84ಕ್ಕೆ ಏರಿಕೆ: 4,000 ಮಂದಿ ಮೇಲೆ ನಿಗಾ

ವಿದೇಶದಿಂದ ಆಗಮಿಸಿದ 12 ಲಕ್ಷ ಪ್ರಯಾಣಿಕರ ತಪಾಸಣೆ

ಪಿಟಿಐ
Published 14 ಮಾರ್ಚ್ 2020, 20:44 IST
Last Updated 14 ಮಾರ್ಚ್ 2020, 20:44 IST
ಇಟಲಿಯಲ್ಲಿ ಸಿಲುಕಿದ್ದ ಕೇರಳ ಮೂಲದವರು ಭಾರತಕ್ಕೆ ಮರಳಿದ್ದು ಕೊಚ್ಚಿಯಲ್ಲಿರುವ ಆಸ್ಪತ್ರೆಗೆ ದಾಖಲಾದರು – ಪಿಟಿಐ ಚಿತ್ರ
ಇಟಲಿಯಲ್ಲಿ ಸಿಲುಕಿದ್ದ ಕೇರಳ ಮೂಲದವರು ಭಾರತಕ್ಕೆ ಮರಳಿದ್ದು ಕೊಚ್ಚಿಯಲ್ಲಿರುವ ಆಸ್ಪತ್ರೆಗೆ ದಾಖಲಾದರು – ಪಿಟಿಐ ಚಿತ್ರ   

ನವದೆಹಲಿ, ಹೈದರಾಬಾದ್‌: ದೇಶದಲ್ಲಿ ಇದುವರೆಗೆ 84 ಮಂದಿಯಲ್ಲಿ ಕೋವಿಡ್‌ 19 ಇರುವುದು ದೃಢಪಟ್ಟಿದೆ. ಈ 84 ಮಂದಿ ಜತೆ ಸಂಪರ್ಕಕ್ಕೆ ಬಂದ 4000 ಮಂದಿ ಮೇಲೆ ನಿಗಾವಹಿಸಲಾಗಿದೆ.

‘ಉತ್ತರ ಪ್ರದೇಶದಲ್ಲಿ ಐವರು ಹಾಗೂ ರಾಜಸ್ಥಾನ ಮತ್ತು ದೆಹಲಿಯ ತಲಾ ಒಬ್ಬರಲ್ಲಿ ಕೋವಿಡ್‌-19 ದೃಢಪಟ್ಟಿತ್ತು. ಇವರಿಗೆ ಚಿಕಿತ್ಸೆ ನೀಡಿದ ಬಳಿಕ ಗುಣಮುಖರಾಗಿದ್ದರಿಂದ ಮನೆಗೆ ಕಳುಹಿಸಲಾಯಿತು’ ಎಂದು ತಿಳಿಸಿದ್ದಾರೆ.

ಇಟಲಿಯ ಮಿಲನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಏರ್‌ ಇಂಡಿಯಾದ ವಿಶೇಷ ವಿಮಾನವನ್ನು ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ವಿದೇಶದಿಂದ ಬಂದ ಸುಮಾರು 12 ಲಕ್ಷ ಪ್ರಯಾಣಿ ಕರನ್ನು ಕೊರೊನಾ ವೈರಸ್‌ ತಪಾ ಸಣೆಗೆ ಒಳಪಡಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೈದರಾಬಾದ್‌ನಲ್ಲಿ ತಿಳಿಸಿದ್ದಾರೆ.

ದೇಶದ 30 ವಿಮಾನ ನಿಲ್ದಾಣಗಳಲ್ಲಿ ಇವರನ್ನು ತಪಾಸಣೆಗೆ ಒಳಪಡಿಸಲಾಗಿದೆ.‌

ಪರಾರಿಯಾಗಿದ್ದ ಅಮೆರಿಕ ದಂಪತಿ ಪತ್ತೆ(ಆಲಪ್ಪುಳ, ಕೇರಳ): ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಅಮೆರಿಕದ ದಂಪತಿ ಆಸ್ಪತ್ರೆಯಿಂದ ಪರಾರಿಯಾದ ಬಳಿಕ ಮತ್ತೆ ಅವರನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪತ್ತೆ ಮಾಡಲಾಗಿದೆ.

ಈ ದಂಪತಿಯನ್ನು ಶುಕ್ರವಾರ ತಡರಾತ್ರಿ ಪತ್ತೆ ಮಾಡಲಾಗಿದ್ದು, ಕೊಚ್ಚಿಯ ಕಲಾಮಸ್ಸೆರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲು ಮಾಡಿ ಪ್ರತ್ಯೇಕವಾಗಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್‌ 9ರಂದು ದೋಹಾ ಮೂಲಕ ಲಂಡನ್‌ನಿಂದ ಕೊಚ್ಚಿಗೆ ಬಂದಿದ್ದ ಈ ದಂಪತಿ, ಮರುದಿನ ಅಲಪ್ಪುಳಗೆ ತೆರಳಿದ್ದರು. ನಂತರ ತಿರುವನಂತಪುರದ ವರ್ಕಾಲಾಗೆ ತೆರಳಿ ಅಲಪ್ಪುಳಗೆ ಹಿಂತಿರುಗಿದ್ದರು.

ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಈ ದಂಪತಿಯನ್ನು ಪ್ರತ್ಯೇಕವಾದ ವಾರ್ಡ್‌ನಲ್ಲಿರಿಸಲಾಗಿತ್ತು. ಅದರೆ, ಸ್ವಲ್ಪ ಹೊತ್ತಿನ ಬಳಿಕ ಅಲ್ಲಿಂದ ತೆರಳಿದ್ದರು.

ಇನ್ನೊಂದೆಡೆ, ಶುಕ್ರವಾರ ಕೋವಿಡ್‌ 19 ದೃಢಪಟ್ಟಿದ್ದ ಇಟಲಿಯ ಪ್ರವಾಸಿಗನ ಜತೆ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳನ್ನು ಪತ್ತೆ ಮಾಡುವ ಕಾರ್ಯವೂ ನಡೆದಿದೆ. ಈತ ಫೆಬ್ರುವರಿ 27ರಂದು ದೆಹಲಿಯಿಂದ ಬಂದಿದ್ದ.

‘ಸುಪ್ರೀಂ’ನ ಆರು ಪೀಠಗಳು ಮಾತ್ರ ಕಾರ್ಯನಿರ್ವಹಣೆ
*ಮಾರ್ಚ್‌ 16ರಿಂದ ಸುಪ್ರೀಂ ಕೋರ್ಟ್‌ನ 15 ಪೀಠಗಳಲ್ಲಿ 6 ಪೀಠಗಳು ಮಾತ್ರ ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿವೆ. 6 ಪ್ರತ್ಯೇಕ ಪೀಠಗಳಲ್ಲಿ ತಲಾ ಇಬ್ಬರು ನ್ಯಾಯಮೂರ್ತಿಗಳಿಂದ ವಿಚಾರಣೆ

*ಗೋವಾದಲ್ಲಿ ಮಾರ್ಚ್‌ 31ರವರೆಗೆ ಪಬ್‌ಗಳು, ಕ್ಯಾಸಿನೊಗಳು, ಕ್ಲಬ್‌ಗಳು, ಜಿಮ್‌ಗಳು, ಸ್ಪಾಗಳು, ಬೋಟ್‌ ಕ್ರೂಸ್‌ಗಳನ್ನು ಮುಚ್ಚಲು ಸರ್ಕಾರದ ಆದೇಶ

*ಕೋವಿಡ್‌ 19ನಿಂದ ಮೃತಪಟ್ಟವರ ಪಾರ್ಥಿವ ಶರೀರ ಅಂತ್ಯಕ್ರಿಯೆಗೆ ಮಾರ್ಗಸೂಚಿ ರೂಪಿಸಲು ಕೇಂದ್ರ ಆರೋಗ್ಯ ಸಚಿವಾಲಯ ಚಿಂತನೆ

*ಮಹಾರಾಷ್ಟ್ರದಲ್ಲಿ ಮತ್ತೆ ಐವರಲ್ಲಿ ಸೋಂಕು. ಇದರಿಂದಾಗಿ, ಸೋಂಕು ಪೀಡಿತರ ಸಂಖ್ಯೆ 31ಕ್ಕೆ ಏರಿಕೆ

*ಪಶ್ಚಿಮ ಬಂಗಾಳ ವಿಧಾನಸಭೆಗೆ ಪತ್ರಕರ್ತರು ಮತ್ತು ಸಂದರ್ಶನಕಾರ ಪ್ರವೇಶಕ್ಕೆ ನಿರ್ಬಂಧ

*ಹಿಮಾಚಲ ಪ್ರದೇಶ, ಗೋವಾ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳು, ಚಿತ್ರಮಂದಿರಗಳನ್ನು ಮಾರ್ಚ್‌ 31ರವರೆಗೆ ಮುಚ್ಚಲು ಆದೇಶ.

*ಮಾರ್ಚ್‌ 22ರವರೆಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಎಲ್ಲ ತರಗತಿಗಳು ರದ್ದು.

*ಅಮೆರಿಕ ರಾಯಭಾರ ಕಚೇರಿ ಮತ್ತು ಕಾನ್ಸಲೇಟ್‌ಗಳು ವೀಸಾ ಸಂದರ್ಶನವನ್ನು ಮಾರ್ಚ್‌ 16ರವರೆಗೆ ರದ್ದುಪಡಿಸಿವೆ.

*ಮಾರ್ಚ್‌ 16ರಿಂದ ತುರ್ತು ಪ್ರಕರಣಗಳ ವಿಚಾರಣೆ ಮಾತ್ರ: ಬಾಂಬೆ ಹೈಕೋರ್ಟ್‌

*ತೆಲಂಗಾಣದಲ್ಲಿ ಮತ್ತೊಂದು ಪ್ರಕರಣ: ಇಟಲಿಯಿಂದ ಹಿಂತಿರುಗಿದ್ದ ವ್ಯಕ್ತಿಗೆ ಸೋಂಕು, ಒಟ್ಟು

*ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ವ್ಯಕ್ತಿಗೆ ಸೋಂಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.