ADVERTISEMENT

ಜಮ್ಮು–ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಸ್ಥಾನ ಶಾಶ್ವತವಲ್ಲ: ಕೇಂದ್ರ ಸರ್ಕಾರ

ಪಿಟಿಐ
Published 29 ಆಗಸ್ಟ್ 2023, 15:58 IST
Last Updated 29 ಆಗಸ್ಟ್ 2023, 15:58 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಸ್ಥಾನ ಶಾಶ್ವತವಲ್ಲ. ಈ ಕುರಿತು ಆಗಸ್ಟ್‌ 31ರಂದು ಸಕಾರಾತ್ಮಕವಾದ ಹೇಳಿಕೆ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್‌ಗೆ ಮಂಗಳವಾರ, ಕೇಂದ್ರ ಸರ್ಕಾರ ತಿಳಿಸಿದೆ.

ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ಅಧ್ಯಕ್ಷತೆಯ ಸಂವಿಧಾನ ನ್ಯಾಯಪೀಠವು 12ನೇ ದಿನವಾದ ಮಂಗಳವಾರವೂ ನಡೆಯಿತು.

‘ನೀವು ಒಂದು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಬಹುದೇ? ಒಂದು ರಾಜ್ಯದಿಂದ ಕೇಂದ್ರಾಡಳಿತ ಪ್ರದೇಶವನ್ನು ರೂಪಿಸಬಹುದೇ ಮತ್ತು ಯಾವಾಗ ಚುನಾವಣೆ ನಡೆಸುತ್ತೀರಿ’ ಎಂದು ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ನ್ಯಾಯಪೀಠವು ಪ್ರಶ್ನಿಸಿತು.

ADVERTISEMENT

‘ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಸಂಬಂಧಿಸಿದಂತೆ ಕಾಲಮಿತಿ ನಿಗದಿಪಡಿಸಬೇಕು’ ಎಂದು ಸೂಚಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್‌ ಮೆಹ್ತಾ, ಅಸ್ಸಾಂ, ತ್ರಿಪುರ ಹಾಗೂ ಅರುಣಾಚಲ ಪ್ರದೇಶದ ಹಿಂದಿನ ಸ್ಥಿತಿಗತಿ ಕುರಿತು ಉಲ್ಲೇಖಿಸಿದರು. ‘ಕೆಲ ಸಮಯದವರೆಗೆ ಲಡಾಕ್‌ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರಿಯಲಿದೆ. ಆದರೆ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಸ್ಥಾನ ಶಾಶ್ವತವಾಗಿರುವುದಿಲ್ಲ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಸ್ಥಿತಿ ಮರಳಿದ ತಕ್ಷಣವೇ ಅಲ್ಲಿ ಮತ್ತೆ ರಾಜ್ಯದ ಸ್ಥಾನವನ್ನು ಮರುಸ್ಥಾಪಿಸಲಾಗುವುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಲೋಕಸಭೆಯಲ್ಲಿ ನೀಡಿರುವ ಹೇಳಿಕೆ ಬಗ್ಗೆ ಗಮನ ಸೆಳೆದರು. 

‘2020ರಲ್ಲಿ ಸ್ಥಳೀಯ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಈಗ ಅಲ್ಲಿ ಪ್ರತಿಭಟನೆಗಳು, ಕಲ್ಲು ಎಸೆತ ಪ್ರಕರಣಗಳು ವರದಿಯಾಗಿಲ್ಲ. ಅಲ್ಲಿ ಕರ್ಫ್ಯೂ ಕೂಡ ಜಾರಿಯಲ್ಲಿಲ್ಲ. ಇದು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಪ್ರಕ್ರಿಯೆಗೆ ಪುರಾವೆಯಾಗಿದೆ’ ಎಂದು ಹೇಳಿದರು.

ವಿಶೇಷ ಸ್ಥಾನಮಾನ ರದ್ದತಿ ಹಾಗೂ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಸಂಬಂಧಿಸಿದ ಕೇಂದ್ರದ ನಿಲುವನ್ನು ಸಮರ್ಥಿಸಿಕೊಂಡ ಮೆಹ್ತಾ ಅವರ ವಾದ ಆಲಿಸಿದ ನ್ಯಾಯಪೀಠವು, ‘ರಾಷ್ಟ್ರೀಯ ಭದ್ರತೆ ದೃಷ್ಟಿಯಲ್ಲಿ ರಾಜ್ಯದ ಸ್ಥಾನ ಮರುಸ್ಥಾ‍ಪಿಸುವುದಕ್ಕೆ ಸಂಬಂಧಿಸಿದ ನಿಮ್ಮ ನಿಲುವನ್ನು ಒಪ್ಪುತ್ತೇವೆ. ಆದರೆ, ಅಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಮುಖ್ಯವಾಗಿದೆ. ಅನಿರ್ದಿಷ್ಟಾವಧಿವರೆಗೆ ಚುನಾವಣಾ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದಿರುವುದನ್ನು ನಾವು ಒಪ್ಪಲು ಸಾಧ್ಯವಿಲ್ಲ’ ಎಂದು ಹೇಳಿತು.

‘ಇಂತಹ ವ್ಯವಸ್ಥೆಯು ಕೊನೆಯಾಗಬೇಕಿದೆ. ಅಲ್ಲಿ ಜನತಂತ್ರದ ಮರುಸ್ಥಾಪನೆಗೆ ಸಂಬಂಧಿಸಿದಂತೆ ಕಾಲಮಿತಿ ನಿಗದಿಪಡಿಸಬೇಕು’ ಎಂದು ಹೇಳಿದ ನ್ಯಾಯಪೀಠವು, ಈ ಕುರಿತು ಕೇಂದ್ರದ ಅಭಿಪ್ರಾಯ ಸಲ್ಲಿಸುವಂತೆ ಎಂದು ಮೆಹ್ತಾ ಹಾಗೂ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರಿಗೆ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.