ADVERTISEMENT

ಕೊಟ್ಟ ಭರವಸೆ ಈಡೇರಿಸುವುದು ನಿಶ್ಚಿತ: ಅಸ್ಸಾಂನಲ್ಲಿ ರಾಹುಲ್ ಗಾಂಧಿ

ಪಿಟಿಐ
Published 31 ಮಾರ್ಚ್ 2021, 8:52 IST
Last Updated 31 ಮಾರ್ಚ್ 2021, 8:52 IST
ಗುವಾಹಟಿಯಲ್ಲಿನ ಕಾಮಾಕ್ಯ ಶಕ್ತಿಪೀಠಕ್ಕೆ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿ, ಪೂಜೆ ಸಲ್ಲಿಸಿದರು
ಗುವಾಹಟಿಯಲ್ಲಿನ ಕಾಮಾಕ್ಯ ಶಕ್ತಿಪೀಠಕ್ಕೆ ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿ, ಪೂಜೆ ಸಲ್ಲಿಸಿದರು   

ಗುವಾಹಟಿ: ‘ಭರವಸೆಗಳನ್ನು ಈಡೇರಿಸುವಲ್ಲಿ ನಮ್ಮ ಪಕ್ಷ ಬಿಜೆಪಿಗಿಂತ ಭಿನ್ನ. ಕೊಟ್ಟ ಭರವಸೆ ಈಡೇರಿಸುವುದು ನಿಶ್ಚಿತ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದರು.

ಬುಧವಾರ ಇಲ್ಲಿನ ನೀಲಾಚಲ್‌ ಬೆಟ್ಟದಲ್ಲಿರುವ ಶಕ್ತಿಪೀಠ ಕಾಮಾಕ್ಯಾ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ನಿಮ್ಮ ಪಕ್ಷ ಚುನಾವಣೆಯಲ್ಲಿ ಗೆದ್ದರೆ ಏನು ಮಾಡುತ್ತದೆ‘ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ‘ನಾವು ಚುನಾವಣೆ ವೇಳೆ ನೀಡಿರುವ ಐದು ಭರವಸೆಗಳನ್ನು ಈಡೇರಿಸುತ್ತೇವೆ‘ ಎಂದರು. ‘ಅವುಗಳನ್ನು ಹೇಗೆ ಈಡೇರಿಸುತ್ತೀರಿ‘ ಎಂಬ ಪ್ರಶ್ನೆಗೆ ಪ್ರತಿಕ್ರಿಯಸಿದ ರಾಹುಲ್ ‘ಭರವಸೆ ಎಂದರೇನು ಎಂದು ನಿಮಗೆ ತಿಳಿದಿದೆಯೇ. ಭರವಸೆ ಈಡೇರಿಸುವ ವಿಚಾರದಲ್ಲಿ ನಾವು ಬಿಜೆಪಿಯವರಂತೆ ನಡೆದುಕೊಳ್ಳುವುದಿಲ್ಲ. ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ‘ ಎಂದು ಹೇಳಿದರು.

ADVERTISEMENT

"ಈ ಹಿಂದಿನ ಚುನಾವಣೆಗಳಲ್ಲಿ ಪಂಜಾಬ್‌, ಛತ್ತೀಸ್‌ಗಡ ಮತ್ತು ಕರ್ನಾಟಕದಲ್ಲಿ ನಮ್ಮ ಪಕ್ಷ ಕೃಷಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು. ಅಲ್ಲಿ ಅಧಿಕಾರಕ್ಕೆ ಬಂದ ಮೇಲೆ, ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ‘ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ, ‘ಅಸ್ಸಾಂನಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಅವಕಾಶ ನೀಡುವುದಿಲ್ಲ, ಐದು ಲಕ್ಷ ಯುವಕರಿಗೆ ಉದ್ಯೋಗದ ಭರವಸೆ, ಎಲ್ಲಾ ಮನೆಗಳಿಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಒದಗಿಸುವುದು, ಗೃಹಿಣಿಯರಿಗೆ ಪ್ರತಿ ತಿಂಗಳು ₹2ಸಾವಿರ ಮಾಸಾಶನ, ಚಹಾ ತೋಟ ಕಾರ್ಮಿಕರ ಕನಿಷ್ಠ ದೈನಂದಿನ ವೇತನವನ್ನು ₹360ಕ್ಕೆ ಹೆಚ್ಚಿಸುವಂತಹ ಐದು ಭರವಸೆಗಳನ್ನು ನೀಡಿದೆ ಎಂದು ರಾಹುಲ್ ಗಾಂಧಿ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ‘ಪಕ್ಷ ಅಧಿಕಾರಕ್ಕೆ ಬಂದರೆ ಇವೆಲ್ಲವನ್ನೂ ಈಡೇರಿಸಲಾಗುವುದು‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.