ADVERTISEMENT

ಉನ್ನಾವ್ ಅತ್ಯಾಚಾರ ಪ್ರಕರಣ: ಬಿಜೆಪಿಯಿಂದ ಕುಲದೀಪ್ ಸೆಂಗರ್ ಉಚ್ಚಾಟನೆ

ಉನ್ನಾವ್ ಅತ್ಯಾಚಾರ ಪ್ರಕರಣ, ಕೊಲೆ ಸಂಚಿನ ಆರೋಪಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:45 IST
Last Updated 1 ಆಗಸ್ಟ್ 2019, 19:45 IST
ಕುಲದೀಪ್ ಸೆಂಗರ್
ಕುಲದೀಪ್ ಸೆಂಗರ್   

ನವದೆಹಲಿ:ಉನ್ನಾವ್ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಶಾಸಕ ಕುಲದೀಪ್ ಸೆಂಗರ್‌ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

2017ರಲ್ಲಿ ಅತ್ಯಾಚಾರ ನಡೆದಿದ್ದರೂ ಬಿಜೆಪಿಯು ಆರೋಪಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರು ಸಾಗುತ್ತಿದ್ದ ಕಾರಿಗೆ ಲಾರಿಯೊಂದುಜುಲೈ 28ರಂದು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಸಂತ್ರಸ್ತೆಯ ಇಬ್ಬರು ಚಿಕ್ಕಮ್ಮಂದಿರು ಮೃತಪಟ್ಟಿದ್ದರು. ಸಂತ್ರಸ್ತೆ ಮತ್ತು ಆಕೆಯ ವಕೀಲ ತೀವ್ರವಾಗಿ ಗಾಯಗೊಂಡಿದ್ದು, ಅವರಿಬ್ಬರ ಸ್ಥಿತಿ ಗಂಭೀರವಾಗಿದೆ.

ಇದು ಅಪಘಾತವಲ್ಲ, ಕೊಲೆ ಎಂದು ಸಂತ್ರಸ್ತೆಯ ಚಿಕ್ಕಪ್ಪ ಮಹೇಶ್ ಸಿಂಗ್ ಆರೋಪಿಸಿದ ನಂತರ ಇದು ದೊಡ್ಡ ಸುದ್ದಿಯಾಯಿತು.ಅತ್ಯಾಚಾರ ನಡೆದು ಎರಡು ವರ್ಷವಾದರೂ ಬಿಜೆಪಿಯು ತನ್ನ ಶಾಸಕನನ್ನು ರಕ್ಷಿಸುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಸಂಸತ್‌ನ ಉಭಯ ಸದನಗಳಲ್ಲೂ ಈ ವಿಷಯ ಪ್ರಸ್ತಾಪವಾಗಿತ್ತು. ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರವು ಸಿಬಿಐಗೆ ವಹಿಸಿತು. ಅಪಘಾತಕ್ಕೆ ಸಂಬಂಧಿಸಿದಂತೆ ಸಿಬಿಐ ಕೊಲೆ ಪ್ರಕರಣ ದಾಖಲಿಸಿಕೊಂಡಿತು.

ಇದರ ಬೆನ್ನಲ್ಲೇ ಸೆಂಗರ್‌ನನ್ನು ಬಿಜೆಪಿಯು ಉಚ್ಚಾಟನೆ ಮಾಡಿದೆ.ಸಂತ್ರಸ್ತೆಯ ರಕ್ಷಣೆಗೆಂದು ನಿಯೋಜಿಸಲಾಗಿದ್ದ ಮೂವರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಲೋಪದ ಕಾರಣ ಅಮಾನತು ಮಾಡಲಾಗಿದೆ.

‘ಒಬ್ಬ ಅಪರಾಧಿಯನ್ನು ರಕ್ಷಿಸಿದ್ದನ್ನು ಬಿಜೆಪಿ ಒಪ್ಪಿಕೊಂಡಂತಾಗಿದೆ. ಕುಲದೀಪ್‌ ಸೆಂಗರ್‌ನನ್ನು ಉಚ್ಚಾಟನೆ ಮಾಡುವ ಮೂಲಕ ಬಿಜೆಪಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳುವತ್ತ ಹೆಜ್ಜೆ ಇರಿಸಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.