
ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ಆರೋಪಿ, ಬಿಜೆಪಿ ಉಚ್ಚಾಟಿತ ನಾಯಕ ಕುಲದೀಪ್ ಸಿಂಗ್ ಸೆಂಗರ್‌ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಜಾಮೀನು ನೀಡಿ ದೆಹಲಿ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಈ ಕುರಿತು ನಾಲ್ಕು ವಾರಗಳ ಒಳಗಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೆಂಗರ್‌ಗೆ ನೋಟಿಸ್ ನೀಡಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್‌ನ ಆದೇಶದ ಅನುಸಾರ ಪ್ರತಿವಾದಿಯನ್ನು(ಸೆಂಗರ್) ಕಸ್ಟಡಿಯಿಂದ ಬಿಡುಗಡೆ ಮಾಡಕೂಡದು ಎಂದೂ ಆದೇಶಿಸಿದೆ.
ಸೆಂಗರ್‌ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಡಿಸೆಂಬರ್ 23ರಂದು ದೆಹಲಿ ಹೈಕೋರ್ಟ್ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಿಬಿಐ ಅರ್ಜಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ ಮಾಹೇಶ್ವರಿ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರು ಇದ್ದ ರಜಾ ಕಾಲದ ಪೀಠವು ಈ ಅರ್ಜಿ ವಿಚಾರಣೆ ನಡೆಸಿತು.
ಸಿಬಿಐ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಆಲಿಸಿದ ಪೀಠವು, ‘ಈ ಪ್ರಕರಣದಲ್ಲಿ ಜನ ಸೇವಕನ ವ್ಯಾಖ್ಯಾನ ಸೇರಿ ಕಾನೂನಿಗೆ ಸಂಬಂಧಿಸಿ ಕೆಲವು ಗಮನಾರ್ಹ ಪ್ರಶ್ನೆಗಳು ಉದ್ಭವಿಸಿವೆ. ಇವುಗಳ ಕುರಿತು ಪರಿಶೀಲನೆ ಅಗತ್ಯ’ ಎಂದು ಅಭಿಪ್ರಾಯಪಟ್ಟಿತು.
‘ಶಿಕ್ಷೆಗೆ ತಡೆ ನೀಡುವ ಆದೇಶಗಳನ್ನು ಸಾಮಾನ್ಯವಾಗಿ ರದ್ದು ಮಾಡಲಾಗುವುದಿಲ್ಲ. ಆದರೆ, ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಸೆಂಗರ್ ಕಸ್ಟಡಿಯಲ್ಲಿ ಇರುವ ಕಾರಣ ಇದೊಂದು ವಿಶಿಷ್ಟ ಪ್ರಕರಣವಾಗಿದೆ’ ಎಂದು ಪೀಠ ಹೇಳಿತು.
ವಿಚಾರಣೆ ವೇಳೆ, ‘ಸಂತ್ರಸ್ತೆಯ ತಂದೆ ಹಾಗೂ ಇತರ ಕೆಲ ವ್ಯಕ್ತಿಗಳನ್ನು ಅಪರಾಧಿಯು ಕೊಲೆ ಮಾಡಿರುವ ಕಾರಣ, ಆತ ಜೈಲಿನಿಂದ ಹೊರಬರ ಕೂಡದು. ಹೀಗಾಗಿ, ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು’ ಎಂದು ಮೆಹ್ತಾ ಕೋರಿದರು.
‘ಈ ಪ್ರಕರಣದಲ್ಲಿ ಶಾಸಕನನ್ನು ಸಾರ್ವಜನಿಕ ಸೇವಕ ಎಂದು ಪರಿಗಣಿಸುವಂತಿಲ್ಲ. ಶಾಸನದಲ್ಲಿ ಅವಕಾಶ ಇರದ ಹೊರತು, ಶಾಸಕ ಎಂಬ ಪದವನ್ನು ಸಾರ್ವಜನಿಕ ಸೇವಕ ಎಂಬುದಾಗಿ ಅರ್ಥೈಸುವಂತಿಲ್ಲ’ ಎಂದು ಸೆಂಗರ್ ಪರ ಹಾಜರಿದ್ದ ಹಿರಿಯ ವಕೀಲರಾದ ಸಿದ್ಧಾರ್ಥ ದವೆ ಹಾಗೂ ಎನ್. ಹರಿಹರನ್ ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ‘ಈ ವ್ಯಾಖ್ಯಾನವನ್ನು ಒಪ್ಪಿಕೊಳ್ಳೋಣ. ಆಗ, ಇಂತಹ ಅಪರಾಧಗಳು ಘಟಿಸಿದಾಗ ಒಬ್ಬ ಕಾನ್‌ಸ್ಟೆಬಲ್ ಅಥವಾ ಪಟವಾರಿಯು ಸಾರ್ವಜನಿಕ ಸೇವಕ ಎನಿಸಿಕೊಳ್ಳುತ್ತಾನೆ. ಒಬ್ಬ ಶಾಸಕ/ಸಂಸದನನ್ನು ಸಾರ್ವಜನಿಕ ಸೇವಕ ಎಂದು ಪರಿಗಣಿಸದ ಕಾರಣ ಅವರಿಗೆ ವಿನಾಯಿತಿ ಸಿಗುತ್ತದಲ್ಲವೇ’ ಎಂದು ಪ್ರಶ್ನಿಸಿತು.
‘ಪೋಕ್ಸೊ ಕಾಯ್ದೆಯಲ್ಲಿ ಸಾರ್ವಜನಿಕ ಸೇವಕ ಎಂಬ ಬಗ್ಗೆ ವ್ಯಾಖ್ಯಾನವೇ ಇಲ್ಲ’ ಎಂದು ಮೆಹ್ತಾ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಇದು ವಿಶಿಷ್ಟ ಪ್ರಕರಣ. ಸೆಂಗರ್ ಪರ ವಕೀಲರ ವಾದದಲ್ಲಿಯೂ ಹುರುಳಿದೆ. ಈ ಬಗ್ಗೆ ಸಮಗ್ರ ಪರಿಶೀಲನೆ ಅಗತ್ಯ ಇದೆ’ ಎಂದು ಹೇಳಿತು.
ಪ್ರಕರಣವೇನು..: ಸೆಂಗರ್ 2017ರಲ್ಲಿ ಬಾಲಕಿಯೊಬ್ಬಳನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದ. ಈ ಪ್ರಕರಣದಲ್ಲಿ ಸೆಂಗರ್ 7 ವರ್ಷ 5 ತಿಂಗಳು ಜೈಲುವಾಸವನ್ನು ಈಗಾಗಲೇ ಅನುಭವಿಸಿದ್ದಾನೆ ಎಂಬ ಕಾರಣ ನೀಡಿ, ನ್ಯಾಯಮೂರ್ತಿಗಳಾದ ಸುಬ್ರಮಣಿಯಂ ಪ್ರಸಾದ್ ಹಾಗೂ ಹರೀಶ್ ವೈದ್ಯನಾಥನ್ ಶಂಕರ್ ಅವರು ಇದ್ದ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು, ಸೆಂಗರ್‌ಗೆ ವಿಧಿಸಿದ್ದ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಿ ಆದೇಶಿಸಿತ್ತು.
ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದು ನಮಗೆ ನಿರಾಳ ತಂದಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳುವೆ. ನನ್ನ ಪತಿಯನ್ನು ಕೊಂದವರಿಗೆ ಮರಣ ದಂಡನೆ ವಿಧಿಸಬೇಕುಸಂತ್ರಸ್ತೆಯ ತಾಯಿ
ಇದು ಒಬ್ಬ ಸಂತ್ರಸ್ತೆಯ ಹೋರಾಟವಷ್ಟೇ ಅಲ್ಲ. ಎಲ್ಲ ಬಾಲಕಿಯರು ನಡೆಸುತ್ತಿರುವ ಹೋರಾಟವಾಗಿದೆ. ಇದು ವಿಶಿಷ್ಟ ಪ್ರಕರಣ ಎಂದು ಸ್ವತಃ ಸುಪ್ರೀಂ ಕೋರ್ಟ್ ಹೇಳಿದೆಯೋಗಿತಾ ಭಯಾನಾ ಅತ್ಯಾಚಾರ ವಿರೋಧಿ ಹೋರಾಟಗಾರ್ತಿ
ಅವನು (ಸೆಂಗರ್) ರಾಕ್ಷಸ. ಆತ ಮೊದಲು ನನ್ನ ಸಹೋದರಿ ಮೇಲೆ ಅತ್ಯಾಚಾರ ಎಸಗಿದ ನಂತರ ಇಡೀ ಕುಟುಂಬವನ್ನೇ ನಾಶ ಮಾಡಿದ. ಆತನಿಗೆ ಯಾವತ್ತೂ ಜಾಮೀನು ಕೊಡಬಾರದುಸಂತ್ರಸ್ತೆಯ ಸಹೋದರಿ
ಸುಪ್ರೀಂ ಕೋರ್ಟ್ ಆದೇಶದಿಂದ ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ಬೆಂಬಲಿಗರಿಗೆ ಜಯ ಸಿಕ್ಕಂತಾಗಿದೆ. ಇದು ಅಂತ್ಯವಲ್ಲ. ನಮ್ಮ ಹೋರಾಟ ಮುಂದುವರಿಯುವುದುಅಲ್ಕಾ ಲಾಂಬಾ ಕಾಂಗ್ರೆಸ್‌ನ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ
‘ಕೆಲವರಿಂದ ರಾಜಕೀಯ ಲಾಭದ ಯತ್ನ’
‘ಕುಲದೀಪ್ ಸಿಂಗ್ ಸೆಂಗರ್‌ಗೆ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದ ವಿಚಾರ ಮುಂದಿಟ್ಟುಕೊಂಡು ಕೆಲವರು ರಾಜಕೀಯ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
‘ನಮ್ಮ ಕಕ್ಷಿದಾರನಿಗೆ ನೀಡಿದ್ದ ಶಿಕ್ಷೆಯನ್ನು ಅಮಾನತು ಮಾಡಿರುವ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಕೆಲವರು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂಬ ಸೆಂಗರ್ ಪರ ವಕೀಲರ ಮಾತಿಗೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಇದು ನಮಗೆ ಅರ್ಥವಾಗುತ್ತದೆ. ನಾವೇನು ದಂತಗೋಪುರದಲ್ಲಿ ಕುಳಿತಿಲ್ಲ. ಕೆಲವರು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಅರಿವು ನಮಗಿದೆ’ ಎಂದು ಸಿಜೆಐ ಸೂರ್ಯ ಕಾಂತ್ ಹೇಳಿದರು.
ಇದೇ ವೇಳೆ ‘ಕೆಲ ವಕೀಲೆಯರು ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದಾರೆ. ಅವರು ಸಾರ್ವಜನಿಕ ವೇದಿಕೆಗಳಲ್ಲಿ ನ್ಯಾಯಮೂರ್ತಿಗಳ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಅವರು ಸಲ್ಲಿಸಿರುವ ಅರ್ಜಿಗಳನ್ನು ವಜಾ ಮಾಡಬೇಕು’ ಎಂದು ಸೆಂಗರ್ ಪರ ವಕೀಲ ಎನ್. ಹರಿಹರನ್ ಕೋರಿದರು.
‘ಶಿಕ್ಷೆಗೆ ತಡೆ ನೀಡಿ ಆದೇಶಿಸಿರುವ ಹೈಕೋರ್ಟ್ ನ್ಯಾಯಮೂರ್ತಿಗಳ ಭಾವಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ. ನ್ಯಾಯಮೂರ್ತಿಗಳ ವಿರುದ್ಧ ಆರೋಪಗಳನ್ನು ಮಾಡಿರುವ ವಿಡಿಯೊ ಕೂಡ ಹರಿದಾಡುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ’ ಎಂದೂ ಹೇಳಿದರು.
‘ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ಇವರು ಕೂಡ ನಮ್ಮಲ್ಲಿರುವ ಅತ್ಯುತ್ತಮ ನ್ಯಾಯಮೂರ್ತಿಗಳಾಗಿದ್ದಾರೆ’ ಎಂದು ಪೀಠ ಹೇಳಿತು. ಸೆಂಗರ್‌ಗೆ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಿ ಹೈಕೋರ್ಟ್ ಹೊರಡಿಸಿದ್ದ ಆದೇಶ ಪ್ರಶ್ನಿಸಿ ವಕೀಲರಾದ ಅಂಜಲಿ ಪಟೇಲ್ ಹಾಗೂ ಪೂಜಾ ಶಿಲ್ಪಕರ್ ಅವರು ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.