ADVERTISEMENT

ಉನ್ನಾವ್‌ ಅತ್ಯಾಚಾರ ಪ್ರಕರಣ: ದೆಹಲಿ ಹೈಕೋರ್ಟ್‌ಗೆ ಸಂತ್ರಸ್ತೆ ಅರ್ಜಿ

ಪಿಟಿಐ
Published 15 ಜನವರಿ 2026, 14:48 IST
Last Updated 15 ಜನವರಿ 2026, 14:48 IST
ಕುಲದೀಪ್ ಸೆನಗರ್
ಕುಲದೀಪ್ ಸೆನಗರ್   

ನವದೆಹಲಿ: ಉನ್ನಾವ್‌ ಅತ್ಯಾಚಾರ ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆ ಪ್ರಶ್ನಿಸಿ ಕುಲದೀಪ್‌ ಸಿಂಗ್ ಸೆನಗರ್‌ ಸಲ್ಲಿಸಿರುವ ಮೇಲ್ಮನವಿ ವಿರುದ್ಧವಾಗಿ ಹೆಚ್ಚಿನ ದಾಖಲೆಗಳನ್ನು ಗಮನಕ್ಕೆ ತರುವ ಸಂಬಂಧ ಸಂತ್ರಸ್ತೆ ಗುರುವಾರ ದೆಹಲಿ ಹೈಕೋರ್ಟ್ ಮೊರೆಹೋಗಿದ್ದಾರೆ.

‘ನನಗೆ ಹಾಗೂ ನನ್ನ ಕುಟುಂಬಕ್ಕೆ ಬೆದರಿಕೆ ಒಡ್ಡಿರುವುದು ಸೇರಿದಂತೆ ಇತ್ತೀಚಿನ ಬೆಳವಣಿಗೆಗಳ ಕುರಿತು ಕೆಲ ಸಂಗತಿಗಳು ಮತ್ತು ದಾಖಲೆಗಳನ್ನು ಕೋರ್ಟ್ ಗಮನಕ್ಕೆ ತರಬೇಕಿದೆ’ ಎಂದು ಸಂತ್ರಸ್ತೆ ಅರ್ಜಿಯಲ್ಲಿ ತಿಳಿಸಿದ್ದಾರೆ.

‘ಜನ್ಮದಿನಾಂಕ ದೃಢೀಕರಿಸುವ ಕುರಿತು ಉನ್ನಾವ್ ಶಾಲೆಯ ಇಬ್ಬರು ಅಧಿಕಾರಿಗಳ ಹೇಳಿಕೆ ದಾಖಲು ಮಾಡಿಕೊಳ್ಳಬೇಕು. ತನಿಖಾಧಿಕಾರಿಗಳ ಮೇಲೆ ಬಿಜೆಪಿ ಉಚ್ಚಾಟಿತ ಮುಖಂಡ ಸೆನಗರ್ ಪ್ರಭಾವ ಬಳಸಿದ್ದಾರೆ. ನನ್ನ ವಯಸ್ಸಿಗೆ ಸಂಬಂಧಿಸಿ ವಿಚಾರಣೆ ವೇಳೆ ತಿದ್ದಿದ ಮತ್ತು ಸುಳ್ಳು ದಾಖಲೆ ಬಳಕೆಯಾಗಿವೆ. ಮೇಲ್ಮನವಿ ವಿಚಾರಣೆಯೂ ಇದರ ಮೇಲೆ ಅವಲಂಬಿತ ಆಗಿರಲಿದೆ’ ಎಂದು ಸಂತ್ರಸ್ತೆ ಹೇಳಿದ್ದಾರೆ.

ADVERTISEMENT

ವಿಚಾರಣೆ ಅಂತಿಮ ಹಂತದಲ್ಲಿದ್ದರೂ ಸಂತ್ರಸ್ತೆಯ ಮನವಿ ಪರಿಗಣಿಸಿದ ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್‌ ಮತ್ತು ಮಧು ಜೈನ್‌ ಅವರು ಇದ್ದ ಪೀಠವು, ಫೆಬ್ರುವರಿ 25ರಂದು ವಿಚಾರಣೆಗೆ ನಿಗದಿಪಡಿಸಿದೆ. ಜನವರಿ 31ರೊಳಗೆ ದಾಖಲೆ ಸಲ್ಲಿಸಲು ಸಂತ್ರಸ್ತೆ ಪರ ವಕೀಲರಿಗೆ ಸೂಚಿಸಿದೆ.

ವಿಚಾರಣಾ ನ್ಯಾಯಾಲಯ 2019ರಲ್ಲಿ ತನಗೆ ವಿಧಿಸಿರುವ ಶಿಕ್ಷೆ ಪ್ರಶ್ನಿಸಿ ಕುಲದೀಪ್ ಸೆನಗರ್‌ ಹೈಕೋರ್ಟ್ ಮೊರೆಹೋಗಿದ್ದರು. ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಅಮಾನತು ಮಾಡಿತ್ತು. ಹೈಕೋರ್ಟ್ ಆದೇಶಕ್ಕೆ 2025ರ ಡಿಸೆಂಬರ್‌ 29ಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.