ADVERTISEMENT

ಉನ್ನಾವ್ ಅತ್ಯಾಚಾರ: ಕುಲದೀಪ್‌ ಸೆಂಗರ್ ಶಿಕ್ಷೆ ಅಮಾನತಿಗೆ ದೆಹಲಿ ಹೈಕೋರ್ಟ್‌ ನಕಾರ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ತಂದೆಯ ಕಸ್ಟಡಿ ಸಾವು ಪ್ರಕರಣ

ಪಿಟಿಐ
Published 19 ಜನವರಿ 2026, 14:00 IST
Last Updated 19 ಜನವರಿ 2026, 14:00 IST
ಆರೋಪಿ ಶಾಸಕ ಸೆಂಗರ್ ಬಂಧನ
ಆರೋಪಿ ಶಾಸಕ ಸೆಂಗರ್ ಬಂಧನ   

ನವದೆಹಲಿ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ತಂದೆ ಕಸ್ಟಡಿಯಲ್ಲಿ ಮೃತಪಟ್ಟ ಪ್ರಕರಣದಲ್ಲಿ ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್‌ ಸಿಂಗ್‌ ಸೆಂಗರ್‌ಗೆ ವಿಧಿಸಿರುವ 10 ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತುಗೊಳಿಸಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.

‘ಶಿಕ್ಷೆಯಿಂದ ಅಮಾನತುಗೊಳಿಸಬೇಕು ಎಂಬ ಮನವಿಯನ್ನು ಸಮರ್ಥಿಸಲು ಸಾಕಷ್ಟು ಪುರಾವೆಗಳನ್ನು ಒದಗಿಸಿಲ್ಲ. ಆದ್ದರಿಂದ ಶಿಕ್ಷೆ ಅಮಾನತುಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ನ್ಯಾಯಮೂರ್ತಿ ರವೀಂದರ್ ಡುಡೇಜಾ ಹೇಳಿದರು.

‘ಅರ್ಜಿದಾರರು ಏಳೂವರೆ ವರ್ಷಗಳ ಸುದೀರ್ಘ ಸೆರೆವಾಸ ಅನುಭವಿಸಿದ್ದು, ಅವರು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯು ವಿಳಂಬವಾಗಿದೆ ಎಂಬುದರ ಅರಿವು ನ್ಯಾಯಾಲಯಕ್ಕೆ ಇದೆ. ಆದರೆ ಈ ವಿಳಂಬಕ್ಕೆ ಅರ್ಜಿದಾರರೇ ಕಾರಣ. ಏಕೆಂದರೆ, ಶಿಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು, ಜಾಮೀನು ವಿಸ್ತರಣೆ ಮತ್ತು ಶಿಕ್ಷೆಯನ್ನು ಅಮಾನತುಗೊಳಿಸಬೇಕು ಎಂದು ಕೋರಿ ಅವರು ಹಲವು ಅರ್ಜಿಗಳನ್ನು ಸಲ್ಲಿಸಿದ್ದಾರೆ’ ಎಂದು ಹೇಳಿದರು.

ADVERTISEMENT

‘ಮೇಲ್ಮನವಿಗಳನ್ನು ಅರ್ಹತೆಯ ಆಧಾರದ ಮೇಲೆ ತ್ವರಿತ ರೀತಿಯಲ್ಲಿ ವಿಚಾರಣೆ ನಡೆಸಿದರೆ ಉದ್ದೇಶವನ್ನು ಪೂರೈಸಲಾಗುತ್ತದೆ’ ಎಂದು ಹೇಳಿ ವಿಚಾರಣೆಯನ್ನು ಫೆಬ್ರುವರಿ 3ಕ್ಕೆ ಮುಂದೂಡಿದರು.

ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಯ ತಂದೆ ಕಸ್ಟಡಿಯಲ್ಲಿ ಮೃತಪಟ್ಟ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು 2020ರ ಮಾರ್ಚ್‌ 13ರಂದು ಸೆಂಗರ್‌ಗೆ 10 ವರ್ಷ ಜೈಲು ಹಾಗೂ ₹10 ಲಕ್ಷ ದಂಡ ವಿಧಿಸಿದೆ.

ಇದೇ ಪ್ರಕರಣದಲ್ಲಿ ನ್ಯಾಯಾಲಯವು ಸೆಂಗರ್‌ ಅವರ ಸಹೋದರ ಅತುಲ್‌ ಸಿಂಗ್‌ ಸೆಂಗರ್‌ ಮತ್ತು ಇತರ ಐವರಿಗೆ 10 ವರ್ಷಗಳ ಶಿಕ್ಷೆ ವಿಧಿಸಿದೆ.

ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಸೆಂಗರ್ ಸೂಚನೆಯಂತೆ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿತ್ತು. ಪೊಲೀಸ್‌ ಕಸ್ಟಡಿಯಲ್ಲಿದ್ದಾಗ 2018ರ ಏಪ್ರಿಲ್‌ 9ರಂದು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.