ADVERTISEMENT

ಆಧಾರರಹಿತ ಆರೋಪ: ಸದನದ ಹಕ್ಕಿನ ಉಲ್ಲಂಘನೆಗೆ ಸಮ- ರಾಜ್ಯಸಭಾ ಸಭಾಪತಿ

ಸಂಸದರಿಗೆ ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್‌ ಎಚ್ಚರಿಕೆ

ಪಿಟಿಐ
Published 12 ಡಿಸೆಂಬರ್ 2022, 14:07 IST
Last Updated 12 ಡಿಸೆಂಬರ್ 2022, 14:07 IST
ಸಭಾಪತಿ ಜಗದೀಪ್ ಧನಕರ್‌ ಅವರು ಸದನದಲ್ಲಿ ಸೋಮವಾರ ಮಾತನಾಡಿದರು–ಪಿಟಿಐ ಚಿತ್ರ    
ಸಭಾಪತಿ ಜಗದೀಪ್ ಧನಕರ್‌ ಅವರು ಸದನದಲ್ಲಿ ಸೋಮವಾರ ಮಾತನಾಡಿದರು–ಪಿಟಿಐ ಚಿತ್ರ       

ನವದೆಹಲಿ (ಪಿಟಿಐ): ‘ಯಾರೂ ಆಧಾರ ರಹಿತ ಆರೋಪ ಮಾಡಬಾರದು. ಹಾಗೊಮ್ಮೆ ಮಾಡಿದರೆ ಅದು ಸದನದ ಹಕ್ಕಿನ ಉಲ್ಲಂಘನೆಗೆ ಸಮನಾಗಲಿದೆ’ ಎಂದು ರಾಜ್ಯಸಭಾ ಸಭಾಪತಿ ಜಗದೀಪ್‌ ಧನಕರ್‌ ಅವರು ಸಂಸದರಿಗೆ ಸೋಮವಾರ ಎಚ್ಚರಿಕೆ ನೀಡಿದ್ದಾರೆ.

ಶೂನ್ಯ ವೇಳೆಯಲ್ಲಿ ಮಾತನಾಡಿದ ಎಎಪಿ ಸಂಸದ ಸಂಜಯ್‌ ಸಿಂಗ್‌, ‘ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅವುಗಳ ಮೂಲಕ ವಿರೋಧ ಪಕ್ಷಗಳ ನಾಯಕರ ಮೇಲೆ ದಾಳಿ ನಡೆಸಲಾಗುತ್ತಿದೆ. ಜಾರಿ ನಿರ್ದೇಶನಾಲಯವು (ಇ.ಡಿ) ಎಂಟು ವರ್ಷಗಳಲ್ಲಿ ವಿರೋಧ ಪಕ್ಷಗಳ ನಾಯಕರಿಗೆ ಸೇರಿದ ಒಟ್ಟು 3,000 ಸ್ಥಳಗಳ ಮೇಲೆ ದಾಳಿ ಕೈಗೊಂಡಿದೆ. ಈ ಪೈಕಿ 23 ಮಂದಿಯನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ’ ಎಂದು ಆರೋಪಿಸಿದರು.

‘ನೀರವ್‌ ಮೋದಿ, ವಿಜಯ್‌ ಮಲ್ಯ, ಲಲಿತ್‌ ಮೋದಿ ಮತ್ತು ರೆಡ್ಡಿ ಸಹೋದರರಂತಹ ವಂಚಕರ ಮೇಲೆ ಕೇಂದ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ ಶಿವಸೇನಾ ಸಂಸದ ಸಂಜಯ್‌ ರಾವುತ್‌, ದೆಹಲಿ ಸಚಿವ ಸತ್ಯೇಂದರ್‌ ಜೈನ್‌ ಅವರನ್ನು ಜೈಲಿಗಟ್ಟಿದೆ. ದೆಹಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರ ನಿವಾಸದ ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸಿವೆ. ಆಡಳಿತಾರೂಢ ಸರ್ಕಾರದ ಜೊತೆ ನಿಕಟ ಸಂಪರ್ಕ ಹೊಂದಿರುವ ಭ್ರಷ್ಟರ ಮೇಲೆ ತನಿಖಾ ಸಂಸ್ಥೆಗಳು ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ’ ಎಂದೂ ದೂರಿದರು.

ADVERTISEMENT

ಇದಕ್ಕೆ ಆಡಳಿತ ಪಕ್ಷದ ಕೆಲ ಸದಸ್ಯರುಆಕ್ಷೇಪ ವ್ಯಕ್ತಪಡಿಸಿದರು. ಸಭಾಪತಿಯವರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

ಆಗ ಮಾತನಾಡಿದ ಜಗದೀಪ್‌ ಧನಕರ್‌, ‘ಸದನದಲ್ಲಿ ಏನೇ ಮಾತನಾಡುವುದಿದ್ದರೂ ಅದು ನಿಖರತೆಯಿಂದ ಕೂಡಿರಬೇಕು. ಪಾವಿತ್ರ್ಯತೆ ಹಾಗೂ ಹಕ್ಕನ್ನು ಪ್ರತಿಪಾದಿಸುವಂತಿರಬೇಕು. ವಾಸ್ತವಾಂಶಕ್ಕೆ ದೂರವಾಗಿರುವ ವಿಚಾರಗಳನ್ನು ಪ್ರಸ್ತಾಪಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಈ ವಿಚಾರದಲ್ಲಿ ನಾನು ತುಂಬಾ ಸ್ಪಷ್ಟವಾಗಿದ್ದೇನೆ’ ಎಂದು ತಿಳಿಸಿದರು.

‘ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ–ವರದಿಗಳು ಅಥವಾ ಬೇರೆ ಯಾರೋ ಹೇಳಿದ್ದರ ಆಧಾರದಲ್ಲಿ ಮಾತನಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಸದನದಲ್ಲಿ ಏನೇ ಆರೋಪ ಮಾಡುವುದಿದ್ದರೂ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡಿರಬೇಕಾಗುತ್ತದೆ’ ಎಂದೂ ಹೇಳಿದರು.

‘ಸದನದಲ್ಲಿ ಕೇಳಲಾದ ಪ್ರಶ್ನೆಗೆ ಸಿಗುವ ಉತ್ತರ, ಮಾಧ್ಯಮಗಳ ವರದಿಗಳು ಹಾಗೂ ಸಂಸತ್ತಿನ ಹೊರಗೆ ಪ್ರಧಾನಿಯವರು ನೀಡಿರುವ ಹೇಳಿಕೆಗಳನ್ನು ಆಧಾರವಾಗಿ ಇಟ್ಟುಕೊಂಡೇ ಸಂಸದರು ಮಾತನಾಡುತ್ತಾರೆ’ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಈ ವಿಚಾರದಲ್ಲಿ ಅಭಿಪ್ರಾಯ ತಿಳಿಸುವಂತೆ ಅಧ್ಯಕ್ಷರುಸದನದ ನಾಯಕ ಪೀಯೂಷ್‌ ಗೋಯಲ್‌ ಅವರಿಗೆ ಸೂಚಿಸಿದರು.

‘ಸಂಜಯ್‌ ಸಿಂಗ್‌ ಅವರ ಆರೋಪಗಳಲ್ಲಿ ಹುರುಳಿಲ್ಲ. ಅವು ಆಧಾರರಹಿತವಾಗಿವೆ.ಆರ್ಥಿಕ ಹಾಗೂ ಇತರ ಪ್ರಕರಣಗಳಲ್ಲಿ ಸಂಸದರು ಹಾಗೂ ಶಾಸಕರ ಮೇಲಿನ ಆರೋಪ ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ’ ಎಂದು ಗೋಯಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.