ADVERTISEMENT

ಉತ್ತರ ಪ್ರದೇಶ: 8ಪೊಲೀಸರನ್ನು ಹತ್ಯೆಗೈದ ವಿಕಾಸ್ ದುಬೆ ಬಂಧಿಸಲು 25 ವಿಶೇಷ ತಂಡ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 10:42 IST
Last Updated 4 ಜುಲೈ 2020, 10:42 IST
ರೌಡಿ ಶೀಟರ್ ವಿಕಾಸ್ ದುಬೆ, ಉತ್ತರಪ್ರದೇಶ ಕಾನ್ಪುರದ ಸಮೀಪದ ಬಿಕ್ರಾದಲ್ಲಿದ್ದ ಆತನ ಮನೆಯನ್ನು ನೆಲಸಮ ಮಾಡಿರುವ ಜಿಲ್ಲಾಡಳಿತ
ರೌಡಿ ಶೀಟರ್ ವಿಕಾಸ್ ದುಬೆ, ಉತ್ತರಪ್ರದೇಶ ಕಾನ್ಪುರದ ಸಮೀಪದ ಬಿಕ್ರಾದಲ್ಲಿದ್ದ ಆತನ ಮನೆಯನ್ನು ನೆಲಸಮ ಮಾಡಿರುವ ಜಿಲ್ಲಾಡಳಿತ   

ಕಾನ್ಪುರ (ಉತ್ತರಪ್ರದೇಶ): ಎಂಟು ಮಂದಿ ಪೊಲೀಸರನ್ನು ಹತ್ಯೆಗೈದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಹಾಗೂ ಆತನ ಸಹಚರರನ್ನು ಬಂಧಿಸಲು 25 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಶನಿವಾರ ಸುದ್ದಿಗಾರರೊಂದಿಗೆ ಈ ವಿಷಯ ತಿಳಿಸಿದ ಕಾನ್ಪುರ ಐಜಿಪಿ ಮೋಹಿತ್ ಅಗರ್‌ವಾಲ್, ತಂಡಗಳು ರಾಜ್ಯ ಹಾಗೂ ಇತರ ರಾಜ್ಯಗಳಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ತಿಳಿಸಿದ್ದಾರೆ.

ವಿಶೇಷ ತಂಡಗಳು 500ಕ್ಕೂ ಹೆಚ್ಚು ಮೊಬೈಲ್ ನಂಬರ್‌ಗಳನ್ನು ತಪಾಸಣೆ ಮಾಡುತ್ತಿದೆ. 60 ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ವಿಕಾಸ್ ದುಬೆನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಮಾಹಿತಿ ನೀಡಿದರೆ ನಗದು ಬಹುಮಾನ

ರೌಡಿ ವಿಕಾಸ್ ದುಬೆ ಅಡಗುದಾಣದ ಬಗ್ಗೆ ಮಾಹಿತಿ ನೀಡಿದರೆ ₹50,000 ನಗದು ಬಹುಮಾನ ಘೋಷಿಸಲಾಗಿದೆ. ಮಾಹಿತಿ ನೀಡಿದವರ ಗುರುತು ರಹಸ್ಯವಾಗಿಡಲಾಗುವುದು ಎಂದು ಐಜಿಪಿ ತಿಳಿಸಿದ್ದಾರೆ.

ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರ ತಂಡ ಆತನ ಅಡಗಿದ್ದ ಗ್ರಾಮದ ಮೇಲೆ ದಾಳಿ ನಡೆಸಿತು. ಪ್ರತಿದಾಳಿ ನಡೆಸಿದ ಆರೋಪಿ ವಿಕಾಸ್ ದುಬೆ ಡಿವೈಎಸ್ಪಿ ಸೇರಿದಂತೆ ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಡೆದು 36 ಗಂಟೆಗಳು ಕಳೆದರೂ ಆರೋಪಿಗಳ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.

ವಿಷಯ ತಿಳಿದ ಕೂಡಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹತ್ಯೆಯಾದ ಕುಟುಂಬಗಳ ಬಳಿ ತೆರಳಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಕುಟುಂಬಗಳಿಗೆ ತಲಾ ₹1ಕೋಟಿ ಪರಿಹಾರ, ಪ್ರತಿಕುಟುಂಬದ ಜವಾಬ್ದಾರಿಯನ್ನು ಸರ್ಕಾರವೇ ನೋಡಿಕೊಳ್ಳುವುದಾಗಿ
ಭರವಸೆ ನೀಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಏಳು ಮಂದಿ ಪೊಲೀಸರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲಕ್ನೋ ಸಮೀಪ ಕೃಷ್ಣನಗರ ಪ್ರದೇಶದ ದುಬೆ ಮನೆಯ ಮೇಲೆ ಪೊಲೀಸರು ಶುಕ್ರವಾರ ತಡರಾತ್ರಿ ದಾಳಿ ನಡೆಸಿದ್ದರು. ಆದರೆ, ಅಲ್ಲಿ ಆರೋಪಿ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.

ವಿಕಾಸ್ ದುಬೆ ಮನೆ ನೆಲಸಮ

ಪೊಲೀಸರನ್ನು ಹತ್ಯೆಗೈದ ನಂತರ ಜಿಲ್ಲಾಡಳಿತ ಆತನ ಸ್ವಗ್ರಾಮವಾದ ಕಾನ್ಪುರದ ಬಿಕ್ರಾದಲ್ಲಿದ್ದ ಆತನ ಮನೆಯನ್ನು ನೆಲಸಮ ಮಾಡಿದೆ. ಆತನ ತಾಯಿ ದುಬೆ ಕೃತ್ಯವನ್ನು ಖಂಡಿಸಿದ್ದು, ಕೂಡಲೆ ತಕ್ಕ ಶಿಕ್ಷೆ ನೀಡುವಂತೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.