ADVERTISEMENT

ಅಲೋಪಥಿ ವೈದ್ಯರು ರಾಕ್ಷಸರು ಎಂದ ಉತ್ತರ ಪ್ರದೇಶ ಬಿಜೆಪಿ ಶಾಸಕ ಸುರೇಂದ್ರ ಸಿಂಗ್

​ಪ್ರಜಾವಾಣಿ ವಾರ್ತೆ
Published 28 ಮೇ 2021, 13:21 IST
Last Updated 28 ಮೇ 2021, 13:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಅಲೋಪಥಿ ವೈದ್ಯರ ಕುರಿತು ಯೋಗ ಗುರು ಬಾಬಾ ರಾಮ್‌ದೇವ್ ಹೇಳಿಕೆ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಕೂಡ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ.

ಸೋಂಕಿತರು ಮೃತಪಟ್ಟ ಬಳಿಕವೂ ತೀವ್ರ ನಿಗಾ ಘಟಕಗಳಲ್ಲಿ (ಐಸಿಯು) ಇರಿಸುವ ಮೂಲಕ ಹಣ ಮಾಡುತ್ತಿರುವ ಅಲೋಪಥಿ ವೈದ್ಯರು ರಾಕ್ಷಸರು ಎಂದು ಸಿಂಗ್ ಹೇಳಿದ್ದಾರೆ.

ಸಿಂಗ್ ಅವರುಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಬೈರಿಯಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

‘ಕೆಲವು ಅಲೋಪಥಿ ವೈದ್ಯರು ರಾಕ್ಷಸರಿಗಿಂತಲೂ ಕಡೆ. ಇವರು ₹10ರ ಮೌಲ್ಯದ ಗುಳಿಗೆಗಳನ್ನು ₹100ಕ್ಕೆ ಮಾರಾಟ ಮಾಡುತ್ತಾರೆ. ಸೋಂಕಿತರು ಮೃತಪಟ್ಟ ಬಳಿಕವೂ ಅವರ ದೇಹವನ್ನು ಹಣಕ್ಕಾಗಿ ಐಸಿಯುನಲ್ಲಿ ಇರಿಸಿಕೊಳ್ಳುತ್ತಾರೆ’ ಎಂದು ಸಿಂಗ್ ಹೇಳಿದ್ದಾರೆ.

ಎಲ್ಲ ಅಲೋಪಥಿ ವೈದ್ಯರೂ ಒಂದೇ ರೀತಿ ಇಲ್ಲ. ಅವರಲ್ಲಿಯೂ ಕೆಲವರು ಉತ್ತಮ ವೈದ್ಯರಿದ್ದಾರೆ ಎಂದೂ ಸಿಂಗ್ ಹೇಳಿದ್ದಾರೆ.

ಬಾಬಾ ರಾಮ್‌ದೇವ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸಿಂಗ್, ಆಯುರ್ವೇದವು ಅಲೋಪಥಿಗೆ ಸರಿಸಮನಾಗಿ ಇದೆ. ಆಯುರ್ವೇದ ಯಾವುದೇ ರೀತಿಯಲ್ಲೂ ಕಡಿಮೆ ಪರಿಣಾಮಕಾರಿಯಲ್ಲ ಎಂದು ಪ್ರತಿಪಾದಿಸಿದ್ದಾರೆ.

‘ಬಾಬಾ ರಾಮ್‌ದೇವ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರು ಆಯುರ್ವೇದದ ಮೂಲಕ ಆರೋಗ್ಯಕರ ಮತ್ತು ಸಮರ್ಥ ಭಾರತಕ್ಕಾಗಿ ಅಭಿಯಾನ ಪ್ರಾರಂಭಿಸಿದ್ದಾರೆ, ಇದು ಶ್ಲಾಘನೀಯ’ ಎಂದು ಸಿಂಗ್ ಹೇಳಿದ್ದಾರೆ.

ಗೋಮೂತ್ರವನ್ನು ಕುಡಿಯುವುದರಿಂದ ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಬಹುದು ಎಂದು ಸಿಂಗ್ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.