
ಶಹಜಹಾನ್‌ಪುರ: ಉತ್ತರ ಪ್ರದೇಶದ 31 ಜಿಲ್ಲೆಗಳಲ್ಲಿ ಅಕ್ರಮವಾಗಿ ಸಂಗ್ರಹಣೆ ಮತ್ತು ಕೊಡೈನ್ ಆಧರಿತ ಕೆಮ್ಮಿನ ಸಿರಪ್ ಮಾರಾಟಕ್ಕೆ ಸಂಬಂಧಿಸಿದಂತೆ ಇದುವರೆಗೂ 74 ಪ್ರಕರಣ ದಾಖಲಿಸಿದ್ದು, 75 ಜನರನ್ನು ಬಂಧಿಸಲಾಗಿದೆ ಎಂದು ಹಣಕಾಸು ಸಚಿವ ಸುರೇಶ್ ಖನ್ನಾ ಶನಿವಾರ ತಿಳಿಸಿದರು.
ದಾಳಿಯ ವೇಳೆ 12.65 ಲಕ್ಷ ಬಾಟಲಿಗಳ ಕೊಡೈನ್ ಆಧರಿತ ಕೆಮ್ಮಿನ ಸಿರಪ್ ವಶಪಡಿಸಿಕೊಳ್ಳಲಾಗಿದ್ದು, 132 ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
‘ದಾಖಲಿಸಿರುವ ಪ್ರಕರಣಗಳಲ್ಲಿನ ಆರೋಪಿಗಳಲ್ಲಿ ಬಹುತೇಕರು ಸಮಾಜವಾದಿ ಪಕ್ಷದೊಂದಿಗೆ ವಿವಿಧ ರೀತಿಯ ನಂಟು ಹೊಂದಿದ್ದಾರೆ. ಇದರ ತನಿಖೆಗಾಗಿ ಡಿಜಿಪಿ ಶ್ರೇಣಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ’ ಎಂದು ಹೇಳಿದರು.
ಎಸ್‌ಐಟಿಯು 15 ಪ್ರಮುಖ ಸಂಚುಕೋರರ ವಿರುದ್ಧ ಕ್ರಮ ತೆಗೆದುಕೊಂಡಿದ್ದು, 12 ಪ್ರಮುಖ ಆರೋಪಿಗಳ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದೆ. ಅಕ್ರಮ ಕೂಟದಲ್ಲಿ ಸಕ್ರಿಯರಾಗಿದ್ದ ಆರೋಪಿಗಳ ಬಂಧನಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲು ದಾಖಲೆಗಳನ್ನು ಸಿದ್ಧಪಡಿಸುತ್ತಿದೆ ಎಂದು ತಿಳಿಸಿದರು.
ಔಷಧಿ ಉತ್ಪಾದನಾ ಕಂಪನಿಗಳು ಸರಬರಾಜು ಮಾಡುವ ಕೊಡೈನ್ ಆಧಾರಿತ ಕೆಮ್ಮಿನ ಸಿರಪ್, ಚಿಲ್ಲರೆ ಔಷಧಿ ಮಳಿಗೆಗಳನ್ನು ತಲುಪುತ್ತಿಲ್ಲ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ವೈದ್ಯಕೀಯ ಬಳಕೆಗಾಗಿ ಸರಕುಗಳನ್ನು ಮಾರ್ಗಪಲ್ಲಟ ಮಾಡಲು ನಕಲಿ ಬಿಲ್‌ಗಳನ್ನು ಬಳಸಲಾಗುತ್ತಿತ್ತು. ಸಿರಪ್ ಅನ್ನು ನೇಪಾಳ ಮತ್ತು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಕೊಡೈನ್ ಕೆಮ್ಮಿನ ಸಿರಪ್ ದಂಧೆಯಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧವೂ ಬುಲ್ಡೋಜರ್ ಕ್ರಮ ಕೈಗೊಳ್ಳುವಂತೆ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ.
‘ಆರೋಪಿಗಳು ಸಮಾಜವಾದಿ ಪಕ್ಷದೊಂದಿಗೆ ನಂಟು ಹೊಂದಿದ್ದರೂ ಸಹ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಿ. ಆದರೆ ಈ ಪ್ರಕರಣದಲ್ಲಿ ಬಿಜೆಪಿಯು ನಿರ್ಣಾಯಕ ಸಂಗತಿಗಳನ್ನು ಮರೆಮಾಚುತ್ತಿದೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಸಿರಪ್‌ನ ದಂಧೆಯಲ್ಲಿ ಸಮಾಜವಾದಿ ಪಕ್ಷದ ಬೆಂಬಲಿಗರು ಭಾಗಿಯಾಗಿದ್ದಾರೆ’ ಎಂದು ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಸಚಿವರು ಬಿಜೆಪಿ ಮುಖಂಡರು ಆರೋಪಿಸಿದ ಬೆನ್ನಿಗೆ ಅಖಿಲೇಶ್ ತಮ್ಮ ನಿಲುವನ್ನು ಬಹಿರಂಗಪಡಿಸಿದ್ದು ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿದ್ದಾರೆ. ‘ಈ ದಂಧೆಯು ಊಹೆಗಿಂತಲೂ ದೊಡ್ಡದಾಗಿದೆ. ಪ್ರಧಾನ ಮಂತ್ರಿಯು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಿಂದಲೇ ಇದು ಹುಟ್ಟಿಕೊಂಡಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.