ADVERTISEMENT

ಉತ್ತರಪ್ರದೇಶ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆ ರದ್ದುಪಡಿಸಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 16:16 IST
Last Updated 24 ಫೆಬ್ರುವರಿ 2024, 16:16 IST
   

ಲಖನೌ: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿ ಪರೀಕ್ಷೆಗಳನ್ನು ಇಲ್ಲಿನ ರಾಜ್ಯ ಸರ್ಕಾರ ಶನಿವಾರ ರದ್ದುಪಡಿಸಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ಈ ಪರೀಕ್ಷೆಗಳನ್ನು ರದ್ದುಪಡಿಸಿದ್ದು, ಮುಂದಿನ ಆರು ತಿಂಗಳೊಳಗೆ ಮತ್ತೆ ಪರೀಕ್ಷೆಗಳನ್ನು ನಡೆಸುವಂತೆ ಸರ್ಕಾರ ಆದೇಶಿಸಿದೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, ‘ಪರೀಕ್ಷೆಗಳ ಮಾನ್ಯತೆ ವಿಚಾರದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ. ಯುವಜನರ ಶ್ರಮದ ವಿಷಯದಲ್ಲಿ ಆಟವಾಡುವವರರನ್ನು ಎಂಥದ್ದೇ ಸಂದರ್ಭದಲ್ಲೂ ಸುಮ್ಮನೆ ಬಿಡುವುದಿಲ್ಲ. ಅಂಥ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಶ್ನೆಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಪಡೆ ಮೂಲಕ ತನಿಖೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.‌

ADVERTISEMENT

ನೇಮಕಾತಿ ಪರೀಕ್ಷೆಯಲ್ಲಿ ನ್ಯಾಯಯುತವಲ್ಲದ ಮಾರ್ಗಗಳ ಮೂಲಕ ಪರೀಕ್ಷೆ ಬರೆಯಲು ಯೋಜಿಸಿದ್ದರು ಎನ್ನಲಾದ 240ಕ್ಕೂ ಹೆಚ್ಚು ಮಂದಿಯನ್ನು ಈಗಾಗಲೇ ರಾಜ್ಯದಾದ್ಯಂತ ಪೊಲೀಸರು ಬಂಧಿಸಿದ್ದಾರೆ.

‘ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಮತ್ತು ವಾಸ್ತವಾಂಶಗಳ ಆಧಾರದ ಮೇಲೆ, ಪರೀಕ್ಷೆಯ ಮಾನ್ಯತೆ ಮತ್ತು ಪಾರದರ್ಶಕತೆಯ ಅತ್ಯುತ್ತಮ ಮಾನದಂಡಗಳನ್ನು ಪರಿಗಣನೆಗೆ ತೆಗೆದುಕೊಂಡಿರುವ ಸರ್ಕಾರವು ಈ ಪರೀಕ್ಷೆಗಳನ್ನು ರದ್ದುಪಡಿಸಿದೆ’ ಎಂದು ಉತ್ತರಪ್ರದೇಶದ ಗೃಹ ಇಲಾಖೆ ತಿಳಿಸಿದೆ.‌

‘ಪರೀಕ್ಷೆ ವೇಳೆ ಯಾವ ಹಂತದಲ್ಲಿ ಲೋಪ ಕಂಡುಬಂದಿದೆಯೋ ಆ ಹಂತದಲ್ಲೇ ಎಫ್‌ಐಆರ್‌ ದಾಖಲಿಸಿ, ಮುಂದಿನ ಕ್ರಮದ ಬಗ್ಗೆ ಖಚಿತಪಡಿಸಿಕೊಳ್ಳಬೇಕೆಂದು ಸರ್ಕಾರವು ನೇಮಕಾತಿ ಮಂಡಳಿಗೆ ನಿರ್ದೇಶಿಸಿದೆ’ ಎಂದೂ ಅದು ಹೇಳಿದೆ.

ಉತ್ತರಪ್ರದೇಶದಲ್ಲಿ ಕಾನ್‌ಸ್ಟೆಬಲ್‌ ಹುದ್ದೆಗಳ ನೇಮಕಾತಿಗಾಗಿ ಫೆಬ್ರುವರಿ 17 ಮತ್ತು 18ರಂದು ಪರೀಕ್ಷೆ ನಡೆಸಲಾಗಿತ್ತು. 48 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.