ADVERTISEMENT

ಉ.ಪ್ರ.: ಮುಸ್ಲಿಂ ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಬಜರಂಗ ಮುನಿ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಏಪ್ರಿಲ್ 2022, 16:11 IST
Last Updated 13 ಏಪ್ರಿಲ್ 2022, 16:11 IST
ಬಜರಂಗ ಮುನಿ ದಾಸ್‌
ಬಜರಂಗ ಮುನಿ ದಾಸ್‌   

ಲಖನೌ: ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವ ಬೆದರಿಕೆಯೊಡ್ಡಿದ್ದ ಉತ್ತರ ಪ್ರದೇಶದ ಬಜರಂಗ ಮುನಿ ದಾಸ್‌ ಅವರನ್ನು ಬಂಧಿಸಲಾಗಿದೆ. ಹನ್ನೊಂದು ದಿನಗಳ ಹಿಂದೆ ಧಾರ್ಮಿಕ ಮೆರವಣಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅವರು ಅತ್ಯಾಚಾರದ ಬೆದರಿಕೆ ಹಾಕಿದ್ದರು.

ಏಪ್ರಿಲ್‌ 2ರಂದು ಬಜರಂಗ ಮುನಿ ಅವರು ಮಾಡಿದ್ದ ಭಾಷಣವು 2 ನಿಮಿಷಗಳ ವಿಡಿಯೊದಲ್ಲಿ ದಾಖಲಾಗಿತ್ತು. ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವ ಬೆದರಿಕೆ ಹಾಕುವ ಮಾತುಗಳು ಅದರಲ್ಲಿ ಕೇಳಿಬಂದಿದ್ದವು.

ಆ ಮಾತುಗಳಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೇರಿದಂತೆ ಹಲವರಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಅವರನ್ನು ಬಂಧಿಸುವಂತೆ ಆಯೋಗವು ಆಗ್ರಹಿಸಿತ್ತು ಹಾಗೂ ಅಂಥ ಹೇಳಿಕೆಗಳಿಗೆ ಪೊಲೀಸರು ಮೌನ ಪ್ರೇಕ್ಷಕರಾಗಬಾರದು ಎಂದು ಹೇಳಿತ್ತು.

ADVERTISEMENT

ಅನಂತರ ಬಜರಂಗ ಮುನಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ದ್ವೇಷ ಪೂರಿತ ಭಾಷಣ ಮತ್ತು ಅನುಚಿತ ಹೇಳಿಕೆಗಳ ಕುರಿತು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾದ ಬೆನ್ನಲ್ಲೇ ಖೈರಾಬಾದ್‌ನ ಮಹರ್ಷಿ ಶ್ರೀ ಲಕ್ಷ್ಮಣ ದಾಸ್‌ ಉದಾಸೀನ್ ಆಶ್ರಮದ ಮುಖ್ಯಸ್ಥ ಬಜರಂಗ ಮುನಿ ದಾಸ್‌ ಅವರ ಕ್ಷಮೆಯಾಚನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

'ನನ್ನ ಹೇಳಿಕೆಯನ್ನು ತಪ್ಪು ರೀತಿಯಲ್ಲಿ ಪ್ರಸ್ತುತ ಪಡಿಸಲಾಗಿದೆ. ನಾನು ಆ ಬಗ್ಗೆ ಬೇಷರತ್ತಾಗಿ ಕ್ಷಮೆಯಾಚಿಸುತ್ತೇನೆ' ಎಂದಿರುವುದು ವಿಡಿಯೊದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.