ADVERTISEMENT

ಮಾನಹಾನಿ ವಿಡಿಯೊ: ಎಫ್‌ಐಆರ್‌ನಿಂದ ಸುಂದರ್ ಪಿಚ್ಚೈ ಹೆಸರು ಕೈಬಿಟ್ಟ ಪೊಲೀಸರು

ಪಿಟಿಐ
Published 12 ಫೆಬ್ರುವರಿ 2021, 9:30 IST
Last Updated 12 ಫೆಬ್ರುವರಿ 2021, 9:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾರಾಣಸಿ(ಉತ್ತರ ಪ್ರದೇಶ): ಪ್ರಧಾನಿ ನರೇಂದ್ರಮೋದಿ ಅವರನ್ನು ಅವಮಾನಿಸುವಂತಹ ವಿಡಿಯೊ ತಯಾರಿಕೆ ಹಿಂದೆ ಗೂಗಲ್‌ ಸಿಇಒ ಸುಂದರ್ ಪಿಚ್ಚೈ ಮತ್ತಿತರ ಮೂವರು ತಂತ್ರಜ್ಞರ ಪಾತ್ರವಿಲ್ಲ ಎಂದು ತಿಳಿದ ನಂತರ ಅವರೆಲ್ಲರ ಹೆಸರುಗಳನ್ನು ಎಫ್‌ಐಆರ್‌ನಿಂದ ತೆಗೆದು ಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿಯವರನ್ನು ಅವಮಾನಿಸುವಂತಹ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿಂತೆ ಕಳೆದ ವಾರ ಗೂಗಲ್ ಸಿಇಒ ಸುಂದರ್ ಪಿಚ್ಚೈ ಸೇರಿದಂತೆ ಇತರೆ 17 ಮಂದಿ ವಿರುದ್ಧ ವಾರಾಣಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ಪ್ರಕರಣದ ಹಿನ್ನೆಲೆ:ಗಾಜಿಯಾಪುರ ಜಿಲ್ಲೆಗೆ ಸೇರಿದ ಸಂಗೀತಗಾರೊಬ್ಬರು ಸ್ಥಳೀಯ ರೆಕಾರ್ಡಿಂಗ್‌ ಸ್ಟುಡಿಯೊದಲ್ಲಿ ಈ ವಿಡಿಯೊವನ್ನು ತಯಾರಿಸಿದ್ದಾರೆ. ಅದು ವಾಟ್ಸ್‌ಆ್ಯಪ್ ನಂತರ ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ಸುಮಾರು 5 ಲಕ್ಷ ವ್ಯೂವ್ಸ್‌ ಪಡೆದಿದೆ.

ADVERTISEMENT

ಆ ವಿಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿಯವನ್ನು ಅವಮಾನಿಸಲಾಗಿದೆ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ಆಕ್ಷೇಪಿಸಿದ್ದರು. ಈ ಸಂಬಂಧ ಆ ವ್ಯಕ್ತಿಗೆ ಎಂಟೂವರೆ ಸಾವಿರಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿದ್ದವು. ಈ ಸಂಬಂಧ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆ ದೂರಿನ ಅನ್ವಯ ವಿಡಿಯೊ ತಯಾರಕರು ಸೇರಿದಂತೆ, ಅದನ್ನು ಪ್ರಕಟಿಸಿದ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರು ಹಾಗೂ ಇತರರ ವಿರುದ್ಧ ವಿವಿಧ ಸೆಕ್ಷನ್‌ಗಳ (ಐಪಿಸಿ 504, 506, 500, 120ಬಿ, ಐಟಿ ಕಾಯ್ದೆ 67) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ವಿಡಿಯೊ ತಯಾರಿಕೆಯಲ್ಲಿ ಗೂಗಲ್‌ ಅಧಿಕಾರಿಗಳ ಪಾತ್ರವಿಲ್ಲ ಎಂದು ತಿಳಿದು ನಂತರ ಗೂಗಲ್‌ ಸಿಇಒ ಸುಂದರ್ ಪಿಚ್ಚೈ ಹಾಗೂ ಗೂಗಲ್‌–ಭಾರತ ವಿಭಾಗದ ಸಂಜಯ್‌ ಕುಮಾರ್ ಗುಪ್ತ ಸೇರಿದಂತೆ ಸಂಸ್ಥೆಯ ಮೂರು ಪ್ರಮುಖ ಅಧಿಕಾರಿಗಳ ಹೆಸರನ್ನು ಎಫ್‌ಐಆರ್‌ನಿಂದ ತಕ್ಷಣವೇ ಕೈಬಿಟ್ಟಿರುವುದಾಗಿ ಭೇಲ್‌ಪುರ ಪೊಲೀಸರು ದೂರವಾಣಿ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.