ADVERTISEMENT

ಚುನಾವಣೆಯಲ್ಲಿ ರಾಷ್ಟ್ರೀಯತೆ, ಅಭಿವೃದ್ಧಿಗೆ ಜನ ಮತ ಹಾಕಿದ್ದಾರೆ- ಆದಿತ್ಯನಾಥ್

ಪಿಟಿಐ
Published 19 ಮಾರ್ಚ್ 2022, 14:49 IST
Last Updated 19 ಮಾರ್ಚ್ 2022, 14:49 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಗೋರಖ್‌ಪುರ: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನರು ರಾಷ್ಟ್ರೀಯತೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯನ್ನು ಆರಿಸಿದ್ದಾರೆ ಎಂದು ಉತ್ತರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಘಂಟಾಘರ್‌ನಲ್ಲಿ ನಡೆದ ಸಾಂಪ್ರದಾಯಿಕ ಭಗವಾನ್ ನರಸಿಂಗ್ ಶೋಭಾಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ‘ಆರತಿ’ ಮಾಡಿದ ನಂತರ ‘ಯೋಗಿ ಯೋಗಿ’ ಮತ್ತು ‘ಜೈ ಶ್ರೀ ರಾಮ್’ ಘೋಷಣೆಗಳ ನಡುವೆಯೂ ಆದಿತ್ಯನಾಥ್ ಅವರು ಬಣ್ಣ ಮತ್ತು ಹೂವಿನ ದಳಗಳೊಂದಿಗೆ ಉತ್ಸಾಹದಿಂದ ಹೋಳಿ ಆಡಿದರು.

'ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಗೋರಖ್‌ಪುರದ ಎಲ್ಲಾ ಒಂಬತ್ತು ವಿಧಾನಸಭೆ ಸ್ಥಾನಗಳಲ್ಲಿ ಮತ್ತು ಈ ವಿಭಾಗದ 28 ರಲ್ಲಿ 27 ಸ್ಥಾನಗಳಲ್ಲಿ ಜನರು ಬಿಜೆಪಿಗೆ ಗೆಲುವನ್ನು ನೀಡಿದ್ದಾರೆ. ಸವಾಲುಗಳನ್ನು ಸಂಘಟಿತವಾಗಿ ಎದುರಿಸಿದರೆ ಜಯಶಾಲಿಯಾಗುತ್ತೇವೆ ಎಂಬ ಸಂದೇಶವನ್ನು ಈ ಹಬ್ಬ ನೀಡುತ್ತದೆ. ಅತ್ಯಂತ ಸವಾಲಿನ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ನೀವೆಲ್ಲರೂ ವಿಜೇತರಾಗಿದ್ದೀರಿ. ಜನರು ರಾಷ್ಟ್ರೀಯತೆ, ಉತ್ತಮ ಆಡಳಿತ ಮತ್ತು ಅಭಿವೃದ್ಧಿಯನ್ನು ಆರಿಸಿಕೊಂಡರು' ಎಂದು ಅವರು ಹೇಳಿದರು.

ADVERTISEMENT

'ಹೋಲಿಕಾ ಮತ್ತು ಹಿರಣ್ಯಕಶ್ಯಪ್ ಇರುವ ಸಮಾಜದಲ್ಲಿ, ಭಕ್ತ ಪ್ರಹ್ಲಾದ ಮತ್ತು ಭಗವಾನ್ ನರಸಿಂಹ ಕೂಡ ಇದ್ದು, ಕೆಟ್ಟದ್ದರ ವಿರುದ್ಧ ಒಳ್ಳೆಯ ವಿಜಯದ ರೂಪದಲ್ಲಿದ್ದಾರೆ. ಬಣ್ಣದ ಹಬ್ಬ ಒಗ್ಗಟ್ಟಿನ ಸಂಕೇತವಾಗಿದ್ದು, ಸನ್ಮಾರ್ಗದಲ್ಲಿ ಸಾಗಲು ಪ್ರೇರಣೆ ನೀಡುತ್ತದೆ ಎಂದರು.

'ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಹಸಿವು ಮತ್ತು ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದ ಪ್ರಯತ್ನಗಳನ್ನು ವಿವರಿಸಿದ ಆದಿತ್ಯನಾಥ್, 'ಡಬಲ್ ಇಂಜಿನ್ ಸರ್ಕಾರವು ಯಾವುದೇ ದಾನವನ್ನು ಮಾಡಿಲ್ಲ, ಆದರೆ ದೇಶದ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವ ಮೂಲಕ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದೆ. ಸರ್ಕಾರವು ಜನರ ಜೀವಗಳನ್ನು ಮಾತ್ರವಲ್ಲದೆ ಅವರ ಜೀವನೋಪಾಯವನ್ನೂ ಉಳಿಸಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.