ADVERTISEMENT

ನಾನು ಹೊರಗಿನವಳಲ್ಲ,ಕೌಶಂಬಿ ಸೊಸೆ: ಪಲ್ಲವಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 21:13 IST
Last Updated 16 ಫೆಬ್ರುವರಿ 2022, 21:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೌಶಂಬಿ (ಉತ್ತರ ಪ್ರದೇಶ): ‘ನಾನು ಹೊರಗಿನವಳಲ್ಲ, ಕೌಶಂಬಿಯ ಸೊಸೆ’ ಎಂದು ಅಪ್ನಾ ದಳ (ಕೆ) ಅಭ್ಯರ್ಥಿ ಪಲ್ಲವಿ ಪಟೇಲ್‌ ಹೇಳಿದ್ದಾರೆ.

ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಅವರ ವಿರುದ್ಧ ಸಿರಾತು ಕ್ಷೇತ್ರದಿಂದ ಪಲ್ಲವಿ ಸ್ಪರ್ಧಿಸುತ್ತಿದ್ದಾರೆ. ಮೌರ್ಯ ಅವರು ‘ಸಿರಾತು ಮಗ’ ಎಂದು ಹೇಳಿಕೊಳ್ಳುವುದಕ್ಕೆ ತಿರುಗೇಟು ನೀಡಿರುವ ಪಲ್ಲವಿ, ‘ಮೌರ್ಯ ಅವರು ಈ ಜಿಲ್ಲೆಯ ಮಗ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ ನಾನು ಮದುವೆ ಆಗಿ ಬಂದಿದ್ದು ಕೌಶಂಬಿಗೆ. ಹಾಗಾಗಿ ನಾನು ಈ ಜಿಲ್ಲೆಯ ಸೊಸೆ’ ಎಂದು ಹೇಳಿದ್ದಾರೆ.

‘ಕೇಶವ್‌ ಪ್ರಸಾದ್‌ ಮೌರ್ಯ ಅವರ ಬಗ್ಗೆ ಜನರು ಅಸಮಾಧಾನ ಹೊಂದಿದ್ದಾರೆ. ಅವರು ಸ್ಪರ್ಧಿಸುತ್ತಿರುವುದು ಜನರ ವಿರುದ್ಧ ಹೊರತು ಎದುರಾಳಿ ಅಭ್ಯರ್ಥಿ ವಿರುದ್ಧ ಅಲ್ಲ. ಇಲ್ಲಿಯ ಜನರಿಗೆ ನಾನೇ ಪ್ರಮುಖ ಆಯ್ಕೆ’ ಎಂದು ಹೇಳಿದರು.

ADVERTISEMENT

ಅಪ್ನಾ ದಳ (ಕೆ) ಮುಖ್ಯಸ್ಥೆ ಪಲ್ಲವಿ ಪಟೇಲ್‌ ಅವರು, ಕೇಂದ್ರ ಸಚಿವೆ ಮತ್ತು ಅಪ್ನಾದಳ (ಎಸ್‌) ಅಧ್ಯಕ್ಷೆ ಅನುಪ್ರಿಯಾ ಪಟೇಲ್‌ ಅವರ ಸೋದರಿ. ಸಮಾಜವಾದಿ ಪಕ್ಷದ ಜೊತೆ ಪಲ್ಲವಿ ಅವರ ಪಕ್ಷ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ.

ಪ್ರತಾಪಗಡದಲ್ಲಿ ಕೃಷ್ಣಾ ಪಟೇಲ್‌ ವಿರುದ್ಧ ಕಣಕ್ಕಿಳಿಸಲಾಗಿದ್ದ ಅಪ್ನಾ ದಳ (ಎಸ್‌) ಅಭ್ಯರ್ಥಿಯನ್ನು ಅನುಪ್ರಿಯಾ ಪಟೇಲ್‌ ಅವರುಕಣದಿಂದ ವಾಪಸ್ಸು ಪಡೆದ್ದರು. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಪ್ನಾ ದಳ (ಎಸ್‌) ಅಭ್ಯರ್ಥಿಯನ್ನು ಅವರು ಕಣದಿಂದ ವಾಪಸ್ಸು ತೆಗೆದುಕೊಳ್ಳಲಿಲ್ಲ, ಬದಲಾಗಿ ಬಿಜೆಪಿಗೆ ಪ್ರತಾಪಗಡಿದಿಂದ ಸ್ಪರ್ಧಿಸುವ ಅವಕಾಶ ನೀಡಿದರು. ತಾಯಿ ಕುರಿತು ಅನುಪ್ರಿಯಾ ಅವರಿಗೆ ಅಷ್ಟೊಂದು ಗೌರವ ಇದ್ದಿದ್ದರೆ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಬೇಡ ಎಂದು ಬಿಜೆಪಿಗೆ ಹೇಳುತ್ತಿದ್ದರು’ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಬಿಜೆಪಿ ದೃಷ್ಟಿಯಲ್ಲಿ ಚುನಾವಣೆಗೂ ಮುನ್ನ ಎಲ್ಲರೂ ಹಿಂದೂಗಳು. ಚುನಾವಣೆ ಮುಗಿಯುತ್ತಿದ್ದಂತೆ ಅವರಲ್ಲಿ ಅರ್ಧದಷ್ಟು ಜನರು ದಲಿತರು ಮತ್ತು ಉಳಿದವರು ಹಿಂದುಳಿದ ವರ್ಗದವರು’ ಎಂದು ಹೇಳಿದರು.

ಮೊದಲ ಮತ್ತು ಎರಡನೇ ಹಂತದ ಮತದಾನ ನಡೆದ ರೀತಿ ನೋಡಿದರೆ ರಾಜ್ಯದಲ್ಲಿ ಬಿಜೆಪಿ ಸೋಲುವುದು ಖಚಿತ. ಈ ಬಾರಿಯ ಚುನಾವಣೆ ನಡೆಯುತ್ತಿರುವುದು ಕಾಮೇರಾ (ದಿನಗೂಲಿ ಕಾರ್ಮಿಕ) ಮತ್ತು ಲೂಟೇರ (ದರೋಡೆಕೋರರು) ನಡುವೆ ಎಂದರು. ಜೊತೆಗೆ, ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 403 ಕ್ಷೇತ್ರಗಳಲ್ಲಿ 300ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಎಸ್‌ಪಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.