ಸಾಂದರ್ಭಿಕ ಚಿತ್ರ
ಆಗ್ರಾ: ಕೊಳದಲ್ಲಿ ಸ್ನಾನ ಮಾಡಲು ತೆರಳಿದ್ದ ನಾಲ್ವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ರಕ್ಷಿಸಲು ಪ್ರಯತ್ನಿಸಿದ ಉಳಿದ ಐವರನ್ನು ಪೊಲೀಸರು ಹಾಗೂ ಸ್ಥಳೀಯರು ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ ಎಂದು ಭಾನುವಾರ ಅಧಿಕಾರಿಗಳು ಹೇಳಿದ್ದಾರೆ.
ಆಗ್ರಾ ಜಿಲ್ಲೆಯ ಯಮುನಾ ಎಕ್ಸ್‌ಪ್ರೆಸ್‌ವೇ ಬಳಿ ಈ ಘಟನೆ ನಡೆದಿದೆ. ಮೃತ ಮಕ್ಕಳು 10–12 ವರ್ಷದವರಾಗಿದ್ದು, ಅವರನ್ನು ಹಿನಾ, ಖುಷಿ, ಚಾಂದನಿ ಮತ್ತು ರಿಯಾ ಎಂದು ಗುರುತಿಸಲಾಗಿದೆ.
ಕೊಳದಲ್ಲಿ ಮುಳುಗಿದ್ದ ನಾಲ್ವರು ಮಕ್ಕಳನ್ನು ರಕ್ಷಿಸಲು ಮತ್ತೆ ನಾಲ್ವರು ಮಕ್ಕಳು ಹಾಗೂ ಒಬ್ಬ ಮಹಿಳೆಯು ಪ್ರಯತ್ನ ನಡೆಸಿದ್ದಾರೆ. ಈ ಐವರು ಸಹ ನೀರಿನಲ್ಲಿ ಮುಳುಗುವ ಸಂಭವವಿತ್ತು. ಅಷ್ಟರಲ್ಲಿ ಸ್ಥಳೀಯರು ಹಾಗೂ ಪೊಲೀಸರು ರಕ್ಷಿಸಲು ತೆರಳಿದ್ದ ಐವರನ್ನು ಕಾಪಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಮಕ್ಕಳ ಕುಟುಂಬದವರು ಔರೈಯಾ ಮತ್ತು ಕಾನ್ಪುರದಿಂದ ಬಂದವರು. ಹಲವು ದಿನಗಳಿಂದ ಇಲ್ಲಿಯೇ ವಾಸಿಸುತ್ತಿದ್ದಾರೆ. ಹತ್ತಿರದ ಹಳ್ಳಿಗಳಲ್ಲಿ ಸಣ್ಣ ವಸ್ತುಗಳನ್ನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂದು ಎತ್ಮಾದ್‌ಪುರದ ಸಹಾಯಕ ಪೊಲೀಸ್ ಕಮಿಷನರ್ ಸುಕನ್ಯಾ ಶರ್ಮಾ ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.