ADVERTISEMENT

ಉತ್ತರ ಪ್ರದೇಶ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿ, ಎಸ್‌ಪಿಗೆ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 14:33 IST
Last Updated 1 ಏಪ್ರಿಲ್ 2023, 14:33 IST

ಲಖನೌ: ಲೋಕಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವಂತೆ ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿ ಮತ್ತು ಅದರ ಪ್ರಮುಖ ಎದುರಾಳಿ ಪಕ್ಷ ಸಮಾಜವಾದಿ ಪಕ್ಷಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂಲಕ ಪ್ರಥಮ ಪ್ರಮುಖ ಪರೀಕ್ಷೆ ಎದುರಾಗಿದೆ.

ಟ್ರಿಪಲ್‌ ಇಂಜಿನ್‌ ಸರ್ಕಾರ (ಕೇಂದ್ರ, ರಾಜ್ಯ, ಸ್ಥಳೀಯ ಸಂಸ್ಥೆಗಳು) ಎಂಬ ಘೋಷಣೆಯೊಂದಿಗೆ ಬಿಜೆಪಿಯು ಚುನಾವಣಾ ಪ್ರಚಾರಕ್ಕೆ ಇಳಿದಿದೆ. ‘ಹಿಂದುತ್ವ’ ಕಾರ್ಯಸೂಚಿ ಜೊತೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರದ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನೂ ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ರೈತರ ಎದುರಿಸುತ್ತಿರುವ ಸಂಕಷ್ಟಗಳು, ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಯಂಥ ವಿಷಯಗಳನ್ನು ಇರಿಸಿಕೊಂಡು ಚುನಾವಣೆ ಎದುರಿಸಲು ಎಸ್‌ಪಿ ಮುಂದಾಗಿದೆ.

ಚುನಾವಣಾ ಪ್ರಚಾರದಲ್ಲಿ ಎಸ್‌ಪಿಗಿಂತ ಬಿಜೆಪಿಯೇ ಮುಂದೆ ಇದೆ. ಯೋಗಿ ಆದಿತ್ಯನಾಥ ಅವರು ಈಗಾಗಲೇ ನಗರಸಭೆಗಳಿಗೆ ಭೇಟಿ ನೀಡಿದ್ದಾರೆ. ಇದೇ ವೇಳೆ, ರಾಜ್ಯ ಸಚಿವರು ವಿವಿಧ ನಗರ ಪಾಲಿಕೆ ಪರಿಷತ್‌ಗಳು ಮತ್ತು ನಗರ ಪಂಚಾಯತಿಗಳಿಗೆ ಭೇಟಿ ನೀಡಿದ್ದಾರೆ.

ADVERTISEMENT

‘ಟ್ರಿಪಲ್‌ ಇಂಜಿನ್‌ ಸರ್ಕಾರ ಮಾತ್ರವೇ ರಾಜ್ಯವನ್ನು ಸಂಪೂರ್ಣವಾಗಿ ಅಭಿವೃದ್ಧಿ ಕಡೆ ಮುನ್ನಡೆಸಲು ಸಾಧ್ಯ. ನಾವು ಈ ಚುನಾವಣೆಯನ್ನು ಸಕಾರಾತ್ಮಕ ಧೋರಣೆಯಿಂದ ಎದುರಿಸುತ್ತಿದ್ದೇವೆ’ ಎಂದು ಬಿಜೆಪಿ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇದೇ ವೇಳೆ, ಬಿಜೆಪಿಯು ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನೂ ಕಣಕ್ಕಿಳಿಸಲು ನಿರ್ಧರಿಸಿದೆ.

ರಾಷ್ಟ್ರೀಯ ಲೋಕದಳದ ಜೊತೆ ಮೈತ್ರಿ ಮಾಡಿಕೊಂಡಿರುವ ಎಸ್‌ಪಿಗೆ ಜಾಟ್‌ ಸಮುದಾಯದ ಬೆಂಬಲ ಸಿಗುವ ನಿರೀಕ್ಷೆ ಇದೆ.

ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಕೂಡಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಇದು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.