ADVERTISEMENT

ಉತ್ತರ ಪ್ರದೇಶ | ಕಿರುಕುಳದಿಂದ ಪ್ರತಿಭಾವಂತ ವಿದ್ಯಾರ್ಥಿನಿ ಸಾವು

ಉತ್ತರ ಪ್ರದೇಶ: ₹3.8 ಕೋಟಿ ಸ್ಕಾಲರ್‌ಶಿಪ್ ಪಡೆದು ಅಮೆರಿಕದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 15:16 IST
Last Updated 11 ಆಗಸ್ಟ್ 2020, 15:16 IST
ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಸುಧೀಕ್ಷಾ ಸಾವನ್ನಪ್ಪಿದ ಸ್ಥಳವನ್ನು ಪೊಲೀಸರು ಪರಿಶೀಲಿಸಿದರು –ಪಿಟಿಐ ಚಿತ್ರ
ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಸುಧೀಕ್ಷಾ ಸಾವನ್ನಪ್ಪಿದ ಸ್ಥಳವನ್ನು ಪೊಲೀಸರು ಪರಿಶೀಲಿಸಿದರು –ಪಿಟಿಐ ಚಿತ್ರ   

ಲಖನೌ (ಉತ್ತರಪ್ರದೇಶ): ಚಹಾ ಮಾರುವವರ ಮಗಳು ಸುಧೀಕ್ಷಾ ಭಾಟಿ (20) ಎರಡು ವರ್ಷಗಳ ಹಿಂದೆ 12ನೇ ತರಗತಿಯಲ್ಲಿ ಟಾಪರ್ ಆಗಿ ₹ 3.5 ಕೋಟಿ ಮೊತ್ತದ ಸ್ಕಾಲರ್‌ಶಿಪ್ ಪಡೆದು ಅಮೆರಿಕಕ್ಕೆ ವಿದ್ಯಾಭ್ಯಾಸಕ್ಕೆ ತೆರಳಿದ್ದರು. ಕಿರುಕುಳದ ಕಾರಣಕ್ಕಾಗಿಯೇ ಹೆಣ್ಣುಮಕ್ಕಳು ಶಿಕ್ಷಣ ಪಡೆಯದ ಉತ್ತರ ಪ್ರದೇಶದಿಂದ ಆಯ್ಕೆಯಾಗಿದ್ದ ಸುಧೀಕ್ಷಾ ಮುಂದೊಂದು ದಿನ ತಾನೂ ಅದೇ ಕಿರುಕುಳಕ್ಕೆ ಬಲಿಯಾಗಬಹುದೆಂಬ ಕಲ್ಪನೆಯನ್ನೂ ಮಾಡಿಕೊಂಡಿರಲಿಲ್ಲ.

ಅಮೆರಿಕದ ಮೆಸ್ಸಾಚ್ಯುಸೆಟ್‌ನ ಪ್ರತಿಷ್ಠಿತ ಬಾಬ್ಸನ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು ಸುಧೀಕ್ಷಾ. ಕೊರೊನಾ ಸೋಂಕು ಕಾರಣಕ್ಕಾಗಿ ಅಲ್ಲಿ ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದರಿಂದ ಭಾರತಕ್ಕೆ ಬಂದಿದ್ದರು. ಬುಲಂದ್‌ಶಹರ್‌ನ ತಮ್ಮ ಸಂಬಂಧಿಕರ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಾರ್ಗದಲ್ಲಿ ಬೈಕ್‌ನಲ್ಲಿ ಹಿಂಬಾಲಿಸಿದ್ದ ಅಪರಿಚಿತರ ಕಿರುಕುಳದಿಂದಾಗಿ ಸುಧೀಕ್ಷಾ ರಸ್ತೆ ಅಪಘಾತದಲ್ಲಿ ಸೋಮವಾರ ಸಾವನ್ನಪ್ಪಿದ್ದಾರೆ.

‘ನಮ್ಮ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ಇಬ್ಬರು ಯುವಕರು ಬುಲೆಟ್ ಬೈಕ್‌ನಲ್ಲಿ ನಮ್ಮನ್ನು ಹಿಂಬಾಲಿಸುತ್ತಿದ್ದರು. ನಂತರ ನಮ್ಮ ವಾಹನವನ್ನು ಓವರ್ ಟೇಕ್ ಮಾಡಿದ ಅವರು ತಮ್ಮ ಬೈಕ್‌ನ ವೇಗ ತಗ್ಗಿಸಿ ನಮ್ಮ ಹತ್ತಿರವೇ ಬಂದು ಕೆಟ್ಟದಾಗಿ ಕಾಮೆಂಟ್ ಮಾಡಿದರು. ನಂತರ ಓವರ್ ಟೇಕ್ ಮಾಡಿ ಏಕಾಏಕಿ ಬ್ರೇಕ್ ಹಾಕಿ ಬೈಕ್ ನಿಲ್ಲಿಸಿಬಿಟ್ಟರು. ಆಗ ನಮ್ಮ ವಾಹನ ಅಪಘಾತಕ್ಕೀಡಾಗಿ ಕೆಳಗೆ ಬಿದ್ದ ಸುಧೀಕ್ಷಾ ಸ್ಥಳದಲ್ಲೇ ಸಾವನ್ನಪ್ಪಿದಳು’ ಎಂದು ವಾಹನ ಓಡಿಸುತ್ತಿದ್ದ ಆಕೆಯ ಚಿಕ್ಕಪ್ಪ ಸತ್ಯೇಂದ್ರ ಭಾಟಿ ಹೇಳಿದರು.

ADVERTISEMENT

ಇವರೊಂದಿಗಿದ್ದ ಸುಧೀಕ್ಷಾಳ ತಮ್ಮನೂ ಅಪಘಾತದಲ್ಲಿ ಗಾಯಗೊಂಡಿದ್ದಾನೆ.

‘ಸುಧೀಕ್ಷಾ ಪ್ರಯಾಣಿಸುತ್ತಿದ್ದ ಬೈಕ್ ಅನ್ನು ಆಕೆಯ ತಮ್ಮ ಚಲಾಯಿಸುತ್ತಿದ್ದ. ಅವರ ಚಿಕ್ಕಪ್ಪ ಅವರೊಂದಿಗೆ ಇರಲಿಲ್ಲ’ ಎಂಬ ಸುಧೀಕ್ಷಾ ಅವರ ಕುಟುಂಬದ ಹೇಳಿಕೆಯನ್ನು ಪೊಲೀಸರು ನಿರಾಕರಿಸಿದ್ದು, ‘ವಿದ್ಯಾರ್ಥಿನಿಗೆ ಯಾವುದೇ ಕಿರುಕುಳವಾಗಿಲ್ಲ. ಇದೊಂದು ರಸ್ತೆ ಅಪ‍ಘಾತ ಪ್ರಕರಣ’ ಎಂದು ಹೇಳಿದ್ದಾರೆ.

ಆದರೆ, ಪೊಲೀಸರ ಮಾತಿಗೆ ಸುಧೀಕ್ಷಾ ಕುಟುಂಬದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಬೈಕ್‌ನಲ್ಲಿ ಹಿಂಬಾಲಿಸಿ ಅಪರಿಚಿತರು ನೀಡಿದ ಕಿರುಕುಳದಿಂದಲೇ ಮಗಳು ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ತನಿಖೆ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ.

ಸುಧೀಕ್ಷಾಳ ಸಾವಿನಿಂದ ಗೌತಮ್‌ಬುದ್ಧ ನಗರದ ದಾದ್ರಿ ಹಳ್ಳಿಯಲ್ಲಿ ಶೋಕ ಆವರಿಸಿದ್ದು, ಗ್ರಾಮಸ್ಥರು ಶ್ರದ್ಧಾಂಜಲಿ ಸಲ್ಲಿಸಿದರು.

ಚಹಾ ಮಾರುವ ಬಡ ತಂದೆಯ ಮಗಳಾಗಿ ಸುಧೀಕ್ಷಾ ಹಲವು ಕಷ್ಟಗಳನ್ನು ಮೆಟ್ಟಿ ಉನ್ನತ ವಿದ್ಯಾಭ್ಯಾಸಕ್ಕೆ ತೆರಳಿದ್ದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಆಕೆಯ ಕುಟುಂಬದ ಸದಸ್ಯರು, ಬಾಲ್ಯದಲ್ಲಿ ಶಾಲೆಗೆ ಹೋಗಲು ಸುಧೀಕ್ಷಾ ನಿತ್ಯವೂ 40 ಕಿ.ಮೀ. ನಡೆಯುತ್ತಿದ್ದನ್ನು ನೆನಪಿಸಿಕೊಂಡು ದುಃಖತಪ್ತರಾದರು.

‘ಈ ಘಟನೆಯು ಉತ್ತರ ಪ್ರದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ ಎಂಬುದನ್ನು ಪ್ರತಿಬಿಂಬಿಸುತ್ತದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಮಹಿಳೆಯರಿಗೆ ಸುರಕ್ಷತೆ ಒದಗಿಸಲು ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.