ನವದೆಹಲಿ: ಇದೇ ಮೊದಲ ಬಾರಿಗೆ ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್‌ಸಿ) ಮುಖ್ಯಸ್ಥರು ದೇಶದಾದ್ಯಂತರ ಇರುವ ಸರ್ಕಾರಿ ಉದ್ಯೋಗಾಕಾಂಕ್ಷಿಗಳೊಂದಿಗೆ ವರ್ಚುವಲ್ ವೇದಿಕೆಯ ಮೂಲಕ ಸಂವಾದ ನಡೆಸಲಿದ್ದಾರೆ.
ಯುಪಿಎಸ್‌ಸಿ ಅಧ್ಯಕ್ಷ ಅಜಯ್‌ಕುಮಾರ್ ಅವರು ದೂರದರ್ಶನದ ಯೂಟ್ಯೂಬ್ ಚಾನೆಲ್ ಮೂಲಕ ಅಕ್ಟೋಬರ್ 1ರಂದು ಮಧ್ಯಾಹ್ನ 12ರಿಂದ 1 ಗಂಟೆವರೆಗೆ ಸಂವಾದ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
‘ಇದೇ ಆಕ್ಟೋಬರ್ 1ರಿಂದ 2026ನೇ ಅಕ್ಟೋಬರ್ 1ರವರೆಗೆ ನಡೆಯಲಿರುವ ಯುಪಿಎಸ್‌ಸಿ ಶತಮಾನೋತ್ಸವ ಆಚರಣೆಯ ಭಾಗವಾಗಿ ಈ ಸಂವಾದ ಆಯೋಜಿಸಲಾಗಿದೆ’ ಎಂದು ಅಜಯ್‌ಕುಮಾರ್ ಅವರು ‘ಲಿಂಕ್‌ಡೆನ್’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
‘ಸಂವಾದದಲ್ಲಿ ಭಾಗಿಯಾಗುವವರ ಸಂಖ್ಯೆಯನ್ನು ಅಂದಾಜಿಸುವ ಸಲುವಾಗಿ ಸೆಪ್ಟೆಂಬರ್ 28ರಿಂದ ಸೆಪ್ಟೆಂಬರ್ 30ರ ಬೆಳಿಗ್ಗೆಯವರೆಗೆ ಪ್ರಶ್ನೆಗಳನ್ನು ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಶ್ನೆಗಳನ್ನು ವಿಡಿಯೊ ಮತ್ತು ಬರವಣಿಗೆ ವಿಧಾನಗಳಲ್ಲಿ interactwithupsc@gmail.com ಎಂಬ ಇ–ಮೇಲ್ ವಿಳಾಸಕ್ಕೆ ಕಳುಹಿಸಬಹುದು’ ಎಂದು ತಿಳಿಸಿದ್ದಾರೆ.
ಸಂವಾದ ನಡೆಯುವ ಅಸಮಯದಲ್ಲಿ ಸಾಮಾಜಿಕ ಜಾಲತಾಣಗಳಾದ ‘ಎಕ್ಸ್’, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಅಧಿಕೃತ ಹ್ಯಾಶ್‌ಟ್ಯಾಗ್ #AskChairmanUPSC ಮೂಲಕ ಪ್ರಶ್ನೆಗಳನ್ನು ಕೇಳಬಹುದು ಎಂದು ಅಜಯ್‌ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.