ADVERTISEMENT

ಯುಪಿಎಸ್‌ಸಿ ಪರೀಕ್ಷೆ: ಅರ್ಜಿಸಲ್ಲಿಕೆಗೆ ಹೊಸ ಪೋರ್ಟಲ್

ಪಿಟಿಐ
Published 28 ಮೇ 2025, 16:21 IST
Last Updated 28 ಮೇ 2025, 16:21 IST
ಯುಪಿಎಸ್‌ಸಿ ಲಾಂಛನ
ಯುಪಿಎಸ್‌ಸಿ ಲಾಂಛನ   

ನವದೆಹಲಿ: ಪರೀಕ್ಷಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಬುಧವಾರ ನೂತನ ಪೋರ್ಟಲ್‌ಗೆ ಚಾಲನೆ ನೀಡಿದೆ.

ಪರೀಕ್ಷಾರ್ಥಿಗಳು ಇನ್ನು ಮುಂದೆ ಹೊಸ ಪೋರ್ಟಲ್‌ ಮೂಲಕವೇ ಅರ್ಜಿಗಳನ್ನು ಭರ್ತಿ ಮಾಡಿ, ಪೂರಕ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕಾಗಿದೆ. ಪೋರ್ಟಲ್‌ನ ಯುಆರ್‌ಎಲ್: https://upsconline.nic.in

ಈ ಕುರಿತು ಹೇಳಿಕೆ ನೀಡಿರುವ ಯುಪಿಎಸ್‌ಸಿ, ‘ಇದುವರೆಗೂ ಬಳಕೆಯಲ್ಲಿದ್ದ ಹಳೆಯ, ಒಂದು ಬಾರಿ ನೋಂದಣಿ (ಒಟಿಆರ್‌) ಮಾದರಿ ಇನ್ನು ಚಾಲ್ತಿಯಲ್ಲಿ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ADVERTISEMENT

ಪೋರ್ಟಲ್‌ನ ಮುಖಪುಟದಲ್ಲಿ ಪರೀಕ್ಷಾರ್ಥಿಗಳಿಗೆ ವಿವರವಾದ ಸೂಚನೆಗಳಿವೆ. ಜೊತೆಗೆ ಅರ್ಜಿ ನಮೂನೆ ಭರ್ತಿ ಮಾಡಲು ಅನುಸರಿಸಬೇಕಾದ ಕ್ರಮ ಕುರಿತು ಮಾರ್ಗದರ್ಶಿ ವಿವರವೂ ಇದೆ ಎಂದು ತಿಳಿಸಿದೆ.

ಸುಲಭ, ಸುಗಮ ಮತ್ತು ಸರಾಗವಾಗಿ ಅರ್ಜಿ ಪರಿಶೀಲನೆ ಮತ್ತು ದೃಢಪಡಿಸುವಿಕೆಗಾಗಿ ಪರೀಕ್ಷಾರ್ಥಿಗಳು ತಮ್ಮ ಆಧಾರ್‌ ಕಾರ್ಡ್‌ ಅನ್ನು ‘ಗುರುತು ದಾಖಲೆ’ಯಾಗಿ ಬಳಸಬೇಕು. ಇದು, ಮುಂದಿನ ಎಲ್ಲ ಪರೀಕ್ಷೆಗಳಿಗೆ ಸಾಮಾನ್ಯ ಮತ್ತು ಶಾಶ್ವತ ದಾಖಲೆಯಾಗಿ ಬಳಕೆಯಾಗಲಿದೆ ಎಂದು ಆಯೋಗವು ವಿವರಿಸಿದೆ.

ನೂತನ ಪೋರ್ಟಲ್‌ ಅನ್ನು ಮೇ 28ರಿಂದ ಅನ್ವಯಿಸುವಂತೆ ಚಾಲನೆ ನೀಡಲಾಗಿದೆ. ಮೇ 28ರಂದು ಅಧಿಸೂಚನೆ ಹೊರಡಿಸಲಾಗಿರುವ ಸಿಡಿಎಸ್‌ ಪರೀಕ್ಷೆ–2, ಎನ್‌ಡಿಎ ಮತ್ತು ಎನ್‌ಎ–II ಪರೀಕ್ಷೆಗಳಿಗೆ ನೂತನ ಪೋರ್ಟಲ್‌ ಮೂಲಕವೇ ಅನ್‌ಲೈನ್‌ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.