ADVERTISEMENT

ತಕ್ಷಣವೇ ತಾತ್ಕಾಲಿಕ ಕೀ– ಉತ್ತರ: ಯುಪಿಎಸ್‌ಸಿ ಹೊಸ ನೀತಿಗೆ ‘ಸುಪ್ರೀಂ’ ಒಪ್ಪಿಗೆ

ಪೂರ್ವಭಾವಿ ಪರೀಕ್ಷೆ ಬಳಿಕ ತಾತ್ಕಾಲಿಕ ಕೀ– ಉತ್ತರ ಪ್ರಕಟ

ಪಿಟಿಐ
Published 15 ಅಕ್ಟೋಬರ್ 2025, 0:08 IST
Last Updated 15 ಅಕ್ಟೋಬರ್ 2025, 0:08 IST
<div class="paragraphs"><p>ಯುಪಿಎಸ್‌ಸಿ</p></div>

ಯುಪಿಎಸ್‌ಸಿ

   

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯ ಬಳಿಕ ತಕ್ಷಣವೇ ತಾತ್ಕಾಲಿಕ ಕೀ– ಉತ್ತರಗಳನ್ನು ಪ್ರಕಟಿಸುವ ಹೊಸ ನೀತಿಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ. ಇದು ಲಕ್ಷಾಂತರ ಅಭ್ಯರ್ಥಿಗಳಲ್ಲಿ ನಿರಾಳ ಭಾವ ಮೂಡಿಸಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್ ನರಸಿಂಹ ಮತ್ತು ಎ.ಎಸ್ ಚಂದೂರ್‌ಕರ್‌ ಅವರ ಪೀಠವು ಯುಪಿಎಸ್‌ಸಿ ಹೊಸ ನೀತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿತಲ್ಲದೆ, ‘ಇದು ತುಂಬಾ ಒಳ್ಳೆಯ ಬೆಳವಣಿಗೆ’ ಎಂದು ಮಂಗಳವಾರ ಹೇಳಿತು.

ADVERTISEMENT

ಪೂರ್ವಭಾವಿ ಪರೀಕ್ಷೆಯ ಕೀ–ಉತ್ತರಗಳು, ಅಭ್ಯರ್ಥಿಗಳ ಕಟ್‌–ಆಫ್‌ ಅಂಕಗಳು ಮತ್ತು ಅಂಕಗಳನ್ನು ಬಹಿರಂಗಪಡಿಸುವಂತೆ ಯುಪಿಎಸ್‌ಸಿಗೆ ನಿರ್ದೇಶನ ನೀಡಬೇಕೇಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪೀಠವು ವಿಲೇವಾರಿ ಮಾಡಿತು.

ಅರ್ಜಿದಾರರು ಬಾಕಿಯಿರುವ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ತಮ್ಮ ವ್ಯಾಪ್ತಿಯ ಹೈಕೋರ್ಟ್‌ಗಳ ಮೊರೆ ಹೋಗಬಹುದು. ಆ ಅರ್ಜಿಗಳ ತ್ವರಿತ ವಿಚಾರಣೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಪೀಠವು ಹೇಳಿತು.

ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯ ನೇಮಿಸಿದ್ದ ಅಮಿಕಸ್‌ ಕ್ಯೂರಿ, ಹಿರಿಯ ವಕೀಲ ಜೈದೀಪ್‌ ಗುಪ್ತಾ ಅವರು ಈ ವಿಷಯದಲ್ಲಿ ಯುಪಿಎಸ್‌ಸಿ ಈಚೆಗೆ ಪ್ರಮಾಣಪತ್ರ ಸಲ್ಲಿಸಿದ್ದನ್ನು ಪೀಠದ ಗಮನಕ್ಕೆ ತಂದರು. ಅದಕ್ಕೆ ಪೀಠ, ‘ತುಂಬಾ ಸಕಾರಾತ್ಮಕವಾದ ಏನೋ ಒಂದು ಬೆಳವಣಿಗೆ ನಡೆದಿದೆ’ ಎಂದಿತು.

ಪೂರ್ವಭಾವಿ ಪರೀಕ್ಷೆ ಬಳಿಕ ತಾತ್ಕಾಲಿಕ ಕೀ– ಉತ್ತರಗಳನ್ನು ಹಾಗೂ ಅಂತಿಮ ಫಲಿತಾಂಶದ ಬಳಿಕ ಅಂತಿಮ ಕೀ– ಉತ್ತರಗಳನ್ನು ಪ್ರಕಟಿಸಲಾಗುವುದು ಎಂದು ಕಳೆದ ತಿಂಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಯು‍‍ಪಿಎಸ್‌ಸಿ ತಿಳಿಸಿತ್ತು.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ‘ಪೂರ್ವಭಾವಿ ಪರೀಕ್ಷೆಯಲ್ಲಿ ‘ತಪ್ಪು ಪ್ರಶ್ನೆ’ಗಳು ಬಂದಿರುವುದಕ್ಕೆ ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಅರ್ಜಿದಾರು ಹಲವು ವರ್ಷಗಳನ್ನು ಹಾಳುಮಾಡಿಕೊಂಡಿದ್ದಾರೆ’ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ನ ಆದೇಶವು ಮುಂಬರುವ ಪರೀಕ್ಷೆಗಳಿಗೆ ಯುಪಿಎಸ್‌ಸಿಯ ನೀತಿಯಲ್ಲಿ ಆಗಿರುವ ಬದಲಾವಣೆಯನ್ನು ಅನುಮೋದಿಸಿದೆ. ಇದು ಭಾರತದ ಪ್ರಮುಖ ನಾಗರಿಕ ಸೇವೆಗಳ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯನ್ನು ಮರುರೂಪಿಸುವ ಸಾಧ್ಯತೆಯಿದೆ.

ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸುವಲ್ಲಿ ಆಯೋಗದ ಬದ್ಧತೆಯನ್ನು ದೃಢಪಡಿಸಿದ್ದ ಯುಪಿಎಸ್‌ಸಿ ಅಧ್ಯಕ್ಷ ಅಜಯ್ ಕುಮಾರ್ ಅವರು ಹೊಸ ನೀತಿಯ ಅನುಷ್ಠಾನದ ಮೇಲ್ವಿಚಾರಣೆ ಮಾಡುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.