ADVERTISEMENT

UPSC | ದೃಷ್ಟಿದೋಷ ಅಭ್ಯರ್ಥಿಗಳಿಗೆ ಶೀಘ್ರವೇ ಸ್ಕ್ರೀನ್‌ ರೀಡರ್‌ ಸೌಲಭ್ಯ

ಸುಪ್ರೀಂ ಕೋರ್ಟ್‌ಗೆ ಕೇಂದ್ರ ಲೋಕಸೇವಾ ಆಯೋಗದಿಂದ ಮಾಹಿತಿ

ಪಿಟಿಐ
Published 31 ಅಕ್ಟೋಬರ್ 2025, 15:55 IST
Last Updated 31 ಅಕ್ಟೋಬರ್ 2025, 15:55 IST
   

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ವಿವಿಧ ಪರೀಕ್ಷೆಗಳಲ್ಲಿ ದೃಷ್ಟಿ ದೋಷವುಳ್ಳ ಅಭ್ಯರ್ಥಿಗಳಿಗೆ ಸ್ಕ್ರೀನ್‌ ರೀಡರ್ ಸಾಫ್ಟ್‌ವೇರ್‌ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿರುವುದಾಗಿ ಆಯೋಗವು ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ತಿಳಿಸಿದೆ. 

ದೃಷ್ಟಿ ದೋಷವುಳ್ಳ ಅಭ್ಯರ್ಥಿಗಳಿಗೆ ಸಮರ್ಪಕ ಅವಕಾಶಗಳ ಕೊರತೆ ಎದುರಾಗಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿಕ್ರಮ ನಾಥ್ ಹಾಗೂ ನ್ಯಾಯಮೂರ್ತಿ ಸಂದೀಪ್‌ ಮೆಹ್ತಾ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸುತ್ತಿದೆ. 

ಈ ಅರ್ಜಿಗೆ ಸಂಬಂಧಿಸಿದಂತೆ ಆಯೋಗವು ಶುಕ್ರವಾರ ಅಫಿಡವಿಟ್‌ ಸಲ್ಲಿಸಿದೆ. ಅದರಲ್ಲಿ ‘ಸ್ಕ್ರೀನ್‌ ರೀಡರ್‌ ಸಾಫ್ಟ್‌ವೇರ್‌ ಸಹಾಯದೊಂದಿಗೆ ಪರೀಕ್ಷೆ ಬರೆಯುವ ಆಯ್ಕೆ ಬಯಸಿದ ದೃಷ್ಟಿ ದೋಷವುಳ್ಳ ಅಭ್ಯರ್ಥಿಗಳಿಗೆ ಈ ಸೌಲಭ್ಯವನ್ನು ಒದಗಿಸಿಕೊಡಬೇಕೆಂಬ ನಿಟ್ಟಿನಲ್ಲಿ ಆಯೋಗವು ಈಗಾಗಲೇ ಪರಿಶೀಲನಾ ಸಭೆ ನಡೆಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸರಿಯಾದ ಮೂಲಸೌಕರ್ಯ/ಸಾಫ್ಟವೇರ್‌ನ ಲಭ್ಯತೆಯನ್ನು ಖಚಿತಪಡಿಸಿಕೊಂಡು, ಪರೀಕ್ಷೆಗಳನ್ನು ನಡೆಸುವ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿದ ತಕ್ಷಣವೇ ಸೌಲಭ್ಯ ಒದಗಿಸಲಾಗುವುದು’ ಎಂದೂ ತಿಳಿಸಿದೆ.

ADVERTISEMENT

ಪ್ರತೀ ಪರೀಕ್ಷಾ ಕೇಂದ್ರದಲ್ಲಿರುವ ದೃಷ್ಟಿ ದೋಷವುಳ್ಳವರ ಸಂಖ್ಯೆ, ಸ್ಕ್ರೀನ್‌ ರೀಡರ್‌ ಸಾಫ್ಟ್‌ವೇರ್‌ ಸೌಲಭ್ಯ ಹೊಂದಿರುವ ಕಂಪ್ಯೂಟರ್‌–ಲ್ಯಾಪ್‌ಟಾಪ್‌ಗಳ ಲಭ್ಯತೆ, ಹೊಸದಾಗಿ ಖರೀದಿಸಬೇಕಾದ ಸಾಫ್ಟ್‌ವೇರ್‌, ಡಿಜಿಟಲ್ ಪ್ರಶ್ನೆ ಪತ್ರಿಕೆಗಳ ತಯಾರಿ ಸೇರಿದಂತೆ ವಿವಿಧ ವಿಚಾರಗಳನ್ನೂ ದೃಷ್ಟಿ ದೋಷವುಳ್ಳ ವ್ಯಕ್ತಿಗಳ ರಾಷ್ಟ್ರೀಯ ಸಬಲೀಕರಣ ಸಂಸ್ಥೆ (ಎನ್‌ಐಇಪಿವಿಡಿ) ಜತೆಗೆ ಚರ್ಚಿಸಲಾಗಿದೆ ಎಂದೂ ಆಯೋಗ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.