
ಎದೆಹಾಲು
ಐಸ್ಟಾಕ್ ಚಿತ್ರ
ಪಟ್ನಾ: ಬಿಹಾರದ ಹಲವು ಜಿಲ್ಲೆಗಳಲ್ಲಿನ ಬಾಣಂತಿಯರ ಎದೆಹಾಲಿನಲ್ಲಿ ಯುರೇನಿಯಂ (U238) ಪತ್ತೆಯಾಗಿದ್ದು, ಶಿಶುಗಳ ಆರೋಗ್ಯ ಕುರಿತು ಅಧ್ಯಯನವೊಂದು ತೀವ್ರ ಕಳವಳ ವ್ಯಕ್ತಪಡಿಸಿದೆ.
ವಿವಿಧ ಸಂಸ್ಥೆಗಳು ನಡೆಸಿದ ಈ ಸಂಶೋಧನೆಯಲ್ಲಿ ಎದೆಹಾಲಿನಲ್ಲಿ ಯುರೇನಿಯಂ ಪತ್ತೆಯಾಗಿರುವುದು ಮಕ್ಕಳಲ್ಲಿ ಕ್ಯಾನ್ಸರ್ ಅಲ್ಲದ ಇತರ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗೆ ಮೂಲವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದೆ.
ಈ ಕುರಿತು ಎಎನ್‌ಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ ದೆಹಲಿ ಏಮ್ಸ್‌ನ ವೈದ್ಯ ಡಾ. ಅಶೋಕ್ ಶರ್ಮಾ, ‘ಈ ಅಧ್ಯಯನಕ್ಕೆ ಹಾಲುಣಿಸುವ 40 ತಾಯಂದಿರನ್ನು ಒಳಪಡಿಸಲಾಗಿತ್ತು. ಅವರ ಎದೆಹಾಲಿನ ಮಾದರಿಯಲ್ಲಿ ಯುರೇನಿಯಂ (U238) ಪತ್ತೆಯಾಗಿದೆ. ಇದು ಶೇ 70ರಷ್ಟು ಮಕ್ಕಳಲ್ಲಿ ಕ್ಯಾನ್ಸರ್‌ಕಾರಕವಲ್ಲದ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಪತ್ತೆಯಾಗಿರುವ ಯುರೇನಿಯಂ ಪ್ರಮಾಣ ಕಡಿಮೆ ಇದ್ದು, ತಾಯಿ ಹಾಗೂ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನೇನು ಉಂಟು ಮಾಡದು. ಆದರೆ ಭವಿಷ್ಯದ ಕುರಿತು ಆತಂಕವಂತೂ ಇದ್ದೇ ಇದೆ’ ಎಂದಿದ್ದಾರೆ.
‘ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಹೆಚ್ಚು ತಾಯಂದಿರ ಎದೆಹಾಲಲ್ಲಿ ಕಂಡುಬಂದಿದೆ. ಅದರಲ್ಲೂ ಕತಿಹಾರ್ ಜಿಲ್ಲೆಯಲ್ಲಿ ಪತ್ತೆಯಾದ ಮಾದರಿಯಲ್ಲಿ ಯುರೇನಿಯಂ ಪ್ರಮಾಣ ಅತ್ಯಧಿಕವಾಗಿದೆ. ಯುರೇನಿಯಂ ಪ್ರಮಾಣ ಇದ್ದಲ್ಲಿ ನರರೋಗ ಉಲ್ಭಣಿಸುವ ಮತ್ತು ಮಕ್ಕಳಲ್ಲಿ ಬುದ್ಧಿ ಪ್ರಮಾಣ ಕಡಿಮೆಯಾಗುವ ಅಪಾಯ ಹೆಚ್ಚು. ಹಾಗೆಂದ ಮಾತ್ರಕ್ಕೆ ಹಾಲುಣಿಸುವುದನ್ನು ನಿಲ್ಲಿಸಬಾರದು. ಏಕೆಂದರೆ ಮಕ್ಕಳ ಪೋಷಕಾಂಶಕ್ಕೆ ಇದು ಅತ್ಯಗತ್ಯ’ ಎಂದು ತಿಳಿಸಿದ್ದಾರೆ.
‘ಎದೆಹಾಲಿನಲ್ಲಿ ಪತ್ತೆಯಾದ ಯುರೇನಿಯಂ ಪ್ರಮಾಣ ಪ್ರತಿ ಲೀಟರ್‌ನಲ್ಲಿ 0ಯಿಂದ 5.25 ಮೈಕ್ರೊ ಗ್ರಾಂನಷ್ಟಿದೆ. ಇದರ ಪರಿಣಾಮಗಳ ಕುರಿತು ಅಧ್ಯಯನ ಮುಂದುವರಿದಿದೆ. ಅಧ್ಯಯನಕ್ಕೆ ಒಳಪಟ್ಟವರ ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ಯುರೇನಿಯಂ ಪತ್ತೆಯಾಗಿದೆ. ಹೀಗಾಗಿ ಹಾಲುಣಿಸುವುದನ್ನು ನಿಲ್ಲಿಸದಂತೆ ತಿಳಿಸಲಾಗಿದೆ’ ಎಂದು ಡಾ. ಅಶೋಕ್ ಶರ್ಮಾ ಹೇಳಿದ್ದಾರೆ.
ಇದರ ಬೆನ್ನಲ್ಲೇ ಇತರ ರಾಜ್ಯಗಳಲ್ಲೂ ಮನುಷ್ಯರ ದೇಹದಲ್ಲಿ ಭಾರಿ ಲೋಹ ಪತ್ತೆ ಮತ್ತು ಅದರಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಸಂಶೋಧನೆ ಮುಂದುವರಿದಿದೆ. ನೈಸರ್ಗಿಕವಾಗಿ ಕಂಡುಬರುವ ವಿಕಿರಣಶೀಲ ರಾಸಾಯನಿಕವಾದ ಯುರೇನಿಯಂ, ಹೆಚ್ಚಾಗಿ ಗ್ರಾನೈಟ್ ಮತ್ತಿತರ ಪ್ರಕಾರದ ಕಲ್ಲುಗಳಲ್ಲಿರುತ್ತದೆ. ಗಣಿಗಾರಿಕೆ, ಕಲ್ಲಿದ್ದಲ್ಲು ದಹನ, ಅಣುಸ್ಥಾನವರದ ಮಾಲಿನ್ಯ ಮತ್ತು ಫಾಸ್ಪೇಟ್ ರಸಗೊಬ್ಬರ ಬಳಕೆಯಿಂದಾಗಿ ಯುರೇನಿಯಂ ಜಲಮೂಲಗಳನ್ನು ಸೇರಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಲಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಕುಡಿಯುವ ನೀರಿನಲ್ಲಿ ಪ್ರತಿ ಲೀಟರ್‌ಗೆ 30 ಮೈಕ್ರೊ ಗ್ರಾಂನಷ್ಟು ಇದ್ದರೆ ಅಪಾಯವಲ್ಲ ಎಂದಿದೆ. ಜರ್ಮನಿಯನ್ನೂ ಒಳಗೊಂಡು ಕೆಲ ರಾಷ್ಟ್ರಗಳಲ್ಲಿ ಇದರ ಮಿತಿಯನ್ನು 10 ಮೈಕ್ರೊ ಗ್ರಾಂಗೆ ಮಿತಿಗೊಳಿಸಲಾಗಿದೆ.
ಭಾರತದಲ್ಲಿ 18 ರಾಜ್ಯಗಳ 151 ಜಿಲ್ಲೆಗಳಲ್ಲಿ ಯುರೇನಿಯಂ ಮಾಲಿನ್ಯ ಪ್ರಮಾಣ ಪತ್ತೆಯಾಗಿದೆ. ಇದರಲ್ಲಿ ಬಿಹಾರದ ವಿವಿಧ ಪ್ರದೇಶಗಳಲ್ಲಿನ ಅಂತರ್ಜಲದಲ್ಲಿ ಶೇ 1.7ರಷ್ಟು ಕಂಡುಬಂದಿರುವುದು ಈವರೆಗಿನ ಅಧ್ಯಯನದಿಂದ ತಿಳಿದುಬಂದಿದೆ.
ಜಾಗತಿಕ ಮಟ್ಟದಲ್ಲಿ ಕೆನಡಾ, ಅಮೆರಿಕ, ಫಿನ್‌ಲೆಂಡ್, ಸ್ವೀಡನ್, ಸ್ವಿಟ್ಜರ್ಲೆಂಡ್, ಬ್ರಿಟನ್, ಬಾಂಗ್ಲಾದೇಶ್, ಚೀನಾ, ಕೊರಿಯಾ, ಮಂಗೋಲಿಯಾ, ಪಾಕಿಸ್ತಾನದಲ್ಲಿ ಮೇಲ್ಮಟ್ಟದಲ್ಲೇ ಯುರೇನಿಯಂ ಪತ್ತೆಯಾಗಿರುವುದು ವರದಿಯಾಗಿದೆ. ಇದರಲ್ಲಿ ಅಂತರ್ಜಲದಲ್ಲಿ ಪತ್ತೆಯಾಗಿರುವುದೇ ಹೆಚ್ಚು ಎಂದು ಜಾಗತಿಕ ಮಟ್ಟದ ಅಧ್ಯಯನ ವರದಿಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.