ADVERTISEMENT

ವಿಮಾನದಲ್ಲಿ ಮದ್ಯ ಪೂರೈಕೆ: ಮರುಪರಿಶೀಲನೆಗೆ ನಿರ್ಧಾರ

ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ l ಕ್ಷಮೆಯಾಚಿಸಿದ ಏರ್‌ ಇಂಡಿಯಾ

ಪಿಟಿಐ
Published 7 ಜನವರಿ 2023, 19:59 IST
Last Updated 7 ಜನವರಿ 2023, 19:59 IST
ಆರೋಪಿ ಶಂಕರ್ ಮಿಶ್ರಾನನ್ನು ಪೊಲೀಸರು ದೆಹಲಿಯ ಪಟಿಯಾಲ ಹೌಸ್‌ ಕೋರ್ಟ್‌ಗೆ ಶನಿವಾರ ಕರೆತಂದರು  –ಪಿಟಿಐ ಚಿತ್ರ
ಆರೋಪಿ ಶಂಕರ್ ಮಿಶ್ರಾನನ್ನು ಪೊಲೀಸರು ದೆಹಲಿಯ ಪಟಿಯಾಲ ಹೌಸ್‌ ಕೋರ್ಟ್‌ಗೆ ಶನಿವಾರ ಕರೆತಂದರು  –ಪಿಟಿಐ ಚಿತ್ರ   

ನವದೆಹಲಿ: ಶಂಕರ್ ಮಿಶ್ರಾ ಎಂಬಾತ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣ ಕುರಿತಂತೆ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಸಿಇಒ ಕ್ಯಾಂಬ್‌ಬೆಲ್ ವಿಲ್ಸನ್ ಅವರು ಕ್ಷಮೆ ಕೋರಿದ್ದಾರೆ. ವಿಮಾನದ ಪೈಲಟ್, ನಾಲ್ವರು ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದ್ದು, ವಿಮಾನದಲ್ಲಿ ಮದ್ಯ ಪೂರೈಕೆ ನೀತಿಯನ್ನು ಪರಾಮರ್ಶಿಸುವುದಾಗಿ ಅವರು ಹೇಳಿದ್ದಾರೆ.

‘ಪ್ರಯಾಣಿಕರೊಬ್ಬರು ವಿಮಾನ ಪ್ರಯಾಣದ ವೇಳೆ ತೋರಿದ ಅನುಚಿತ ವರ್ತನೆಯಿಂದ ಸಹ ಪ್ರಯಾಣಿಕರಿಗೆ ಇರಿಸುಮುರಿಸು ಉಂಟಾಗಿದೆ. ಈ ಬಗ್ಗೆ ವಿಷಾದವಿದೆ. ಈ ವಿಚಾರವನ್ನು ಇನ್ನಷ್ಟು ಸೂಕ್ತವಾಗಿ ನಿರ್ವಹಿಸಬಹುದಿತ್ತು. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಸಂಸ್ಥೆ ಬದ್ಧವಾಗಿದೆ’ ಎಂದು ವಿಲ್ಸನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಘಟನೆ ನಡೆದಾಗ ಎಐ–102 ವಿಮಾನದಲ್ಲಿ ಕರ್ತವ್ಯದಲ್ಲಿದ್ದ ಒಬ್ಬ ಪೈಲಟ್ ಹಾಗೂ ನಾಲ್ವರು ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಜೊತೆಗೆ ವಿಚಾರಣೆ ಮುಗಿಯುವರೆಗೂ ಅವರನ್ನು ಅಮಾನತಿನಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆದರೆ ತಪ್ಪದೇ ವರದಿ ಮಾಡುವಂತೆ ಸಂಸ್ಥೆಯ ಸಿಬ್ಬಂದಿಗೆ ಅವರು ಮನವಿ
ಮಾಡಿದ್ದಾರೆ.

ADVERTISEMENT

ಘಟನೆಯ ನಿರ್ವಹಣೆ, ಮದ್ಯ ಪೂರೈಕೆ, ಪ್ರಯಾಣದ ವೇಳೆ ದೂರು ದಾಖಲು ವ್ಯವಸ್ಥೆ, ಸಂಸ್ಥೆಯ ಸಿಬ್ಬಂದಿಯಿಂದ ಲೋಪ ಆಗಿದೆಯೇ ಎಂಬಂತಹ ವಿಚಾರಗಳ ಕುರಿತು ಏರ್ ಇಂಡಿಯಾ ಆಂತರಿಕ ತನಿಖೆ ಕೈಗೊಂಡಿದೆ. ವಿಮಾನ ಪ್ರಯಾಣದ ವೇಳೆ ಮದ್ಯ ಪೂರೈಸುವ ನೀತಿಯನ್ನು ಪರಿಷ್ಕರಿಸುವ ಕುರಿತು ಸಿಇಒ ಸುಳಿವು ನೀಡಿದ್ದಾರೆ.

ವಿಮಾನ ಪ್ರಯಾಣದ ವೇಳೆ ನಡೆಯುವ ಈ ರೀತಿಯ ಘಟನೆಯನ್ನು ಲಿಖಿತವಾಗಿ ವರದಿ ಮಾಡುವ ಈಗಿನ ವ್ಯವಸ್ಥೆಯನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಲು ಸಂಸ್ಥೆ
ಮುಂದಾಗಿದೆ.

ಸಿಗದ ಪೊಲೀಸ್‌ ಕಸ್ಟಡಿ

ಆರೋಪಿ ಶಂಕರ್‌ ಮಿಶ್ರಾನನ್ನು ಕಸ್ಟಡಿಗೆ ಪಡೆಯಲು ದೆಹಲಿ ಪೊಲೀಸರು ಯತ್ನಿಸಿದ್ದರು.

ಆರೋಪಿಯ ತನಿಖೆ ನಡೆಸಲು ಮೂರು ದಿನ ತಮ್ಮ ಕಸ್ಟಡಿಗೆ ಒಪ್ಪಿಸಬೇಕು ಎಂದು ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದರು. ವಿಮಾನದ ಪೈಲಟ್‌ಗಳು, ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಆರೋಪಿಯನ್ನು ಗುರುತಿಸುವ ಅಗತ್ಯವಿದೆ ಎಂದು ಪೊಲೀಸರು ಕೋರ್ಟ್‌ಗೆ ತಿಳಿಸಿದರು. ಆದರೆ ಇದಕ್ಕೆ ಕೋರ್ಟ್ ಒಪ್ಪಲಿಲ್ಲ. ‘ಸಾಕ್ಷಿಗಳ ಹೇಳಿಕೆ ದಾಖಲಿಸಲು ಆರೋಪಿಯ ಪೊಲೀಸ್ ಕಸ್ಟಡಿ ಅಗತ್ಯವಿಲ್ಲ. ಆರೋಪಿಯ ಅನುಪಸ್ಥಿತಿಯಲ್ಲೂ ಹೇಳಿಕೆ ದಾಖಲಿಸಬಹುದು’ ಎಂದು ಮೆಟ್ರೊಪಾಲಿಟನ್ ನ್ಯಾಯಾಧೀಶರಾದ ಅನಾಮಿಕಾ ಅವರು ಸ್ಪಷ್ಟಪಡಿಸಿದರು.

ಆರೋಪಿಯು ತನಿಖೆಗೆ ಸಹಕರಿಸುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂಬ ವಿಚಾರವನ್ನು ಕೋರ್ಟ್‌ ಪರಿಗಣಿಸಿತು. ‘ಈ ಪ್ರಕರಣದಲ್ಲಿ ಸಾರ್ವಜನಿಕ ವಲಯದಿಂದ ಒತ್ತಡವಿದೆ. ಈ ಕಾರಣಕ್ಕಾಗಿ ಪೊಲೀಸ್ ಕಸ್ಟಡಿಗೆ ಕೇಳಬೇಡಿ. ಕಾನೂನಿನ ಪ್ರಕಾರ ಹೋಗಿ’ ಎಂದು ನ್ಯಾಯಾಧೀಶರು ಹೇಳಿದರು. ಎಫ್‌ಐಆರ್ ಪ್ರತಿಯನ್ನು ಆರೋಪಿ ಪರ ವಕೀಲರಿಗೆ ನೀಡಲು ಪೊಲೀಸರು ನಿರಾಕರಿಸಿದರು.

ಸಿಬ್ಬಂದಿ ಹೇಳಿಕೆ ದಾಖಲು

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಘಟನೆಯ ಕುರಿತಂತೆ ಏರ್ ಇಂಡಿಯಾ ವಿಮಾನದ ಮೂವರು ಸಿಬ್ಬಂದಿಯನ್ನು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಶನಿವಾರ ವಿಚಾರಣೆ ನಡೆಸಲಾಯಿತು.

ಒಂಬತ್ತು ಸಿಬ್ಬಂದಿಯನ್ನು ವಿಚಾರಣೆಗೆ ಕರೆಯಲಾಗಿತ್ತು. ಈ ಪೈಕಿ ಮೂವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿರ್ವಹಣೆ ವೈಫಲ್ಯ: ಸಹಪ್ರಯಾಣಿಕ ಕಿಡಿ

ಮೂತ್ರ ವಿಸರ್ಜನೆ ಘಟನೆಯಿಂದ ಆಘಾತಕ್ಕೊಳಗಾಗಿದ್ದ ಮಹಿಳೆಗೆ ಬದಲಿ ಆಸನದ ವ್ಯವಸ್ಥೆ ಮಾಡುವಲ್ಲಿ ವಿಮಾನದ ಪೈಲಟ್ ವಿಫಲರಾಗಿದ್ದಾರೆ ಎಂದು ಏರ್ ಇಂಡಿಯಾ ವಿಮಾನದಲ್ಲಿ ಸಂಚರಿಸಿದ್ದ ಸಹ ಪ್ರಯಾಣಿಕ ಡಾ. ಸುಗತ ಭಟ್ಟಾಚಾರ್ಯ ಅವರು ಆರೋಪಿಸಿದ್ದಾರೆ. ವಿಮಾನದ ಫಸ್ಟ್‌ ಕ್ಲಾಸ್‌ ವಿಭಾಗದಲ್ಲಿ ನಾಲ್ಕು ಆಸನಗಳು ಖಾಲಿಯಿದ್ದರೂ, ವಿಮಾನದ ಸಿಬ್ಬಂದಿಗೆ ಮೀಸಲಾದ ಚಿಕ್ಕ ಸೀಟನ್ನು ಸಂತ್ರಸ್ತ ಮಹಿಳೆಗೆ ಕೊಟ್ಟಿದ್ದು ಏಕೆ ಎಂದು ಅವರು ತಮ್ಮ ದೂರಿನಲ್ಲಿ ಪ್ರಶ್ನಿಸಿದ್ದಾರೆ.

ಬದಲಿ ಆಸನ ಕಲ್ಪಿಸುವಾಗ ಆದ ಯಡವಟ್ಟಿನ ಬಗ್ಗೆ ಸಂತ್ರಸ್ತ ಮಹಿಳೆಯೂ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ‘20 ನಿಮಿಷ ಕಳೆದ ಬಳಿಕ ವಿಮಾನದ ಸಿಬ್ಬಂದಿ ಕುಳಿತುಕೊಳ್ಳುವ ಸಣ್ಣ ಸೀಟಿನಲ್ಲಿ ಕುಳಿತುಕೊಳ್ಳುವಂತೆ ನನಗೆ ಸೂಚಿಸಲಾಯಿತು. ಎರಡು ಗಂಟೆಯ ನಂತರ ಮತ್ತೆ ನನ್ನ ಸೀಟಿಗೆ ಹೋಗುವಂತೆ ಸೂಚಿಸಲಾಯಿತು. ಆದರೆ ಅಲ್ಲಿ ಮೂತ್ರದ ವಾಸನೆ ಬರುತ್ತಿದ್ದುದರಿಂದ ನಾನು ಅಲ್ಲಿ ಕುಳಿತುಕೊಳ್ಳಲು ನಿರಾಕರಿಸಿದೆ. ಉಳಿದ ನನ್ನ ಪೂರ್ಣ ಪ್ರಯಾಣವನ್ನು ಮೇಲ್ವಿಚಾರಕರ ಸೀಟಿನಲ್ಲೇ ಮುಂದುವರಿಸಬೇಕಾಯಿತು’ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.

ಆರೋಪಿಗೆ ನ್ಯಾಯಾಂಗ ಬಂಧನ

ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಶಂಕರ್ ಮಿಶ್ರಾ ಎಂಬ ವ್ಯಕ್ತಿಯನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಶನಿವಾರ ಬಂಧಿಸಿದ್ದಾರೆ. ದೆಹಲಿ ಕೋರ್ಟ್ ಆತನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕಳೆದ ವರ್ಷದ ನವೆಂಬರ್ 26ರಂದು ನ್ಯೂಯಾರ್ಕ್‌–ದೆಹಲಿ ಮಾರ್ಗದ ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ಮಹಿಳೆಯ ಮೇಲೆ ಮದ್ಯದ ಅಮಲಿನಲ್ಲಿದ್ದ ಆರೋಪಿಯು ಮೂತ್ರ ವಿಸರ್ಜನೆ ಮಾಡಿದ್ದ.

ದೇಶ ಬಿಟ್ಟು ತೆರಳದಂತೆ ಆರೋಪಿ ವಿರುದ್ಧ ಲುಕ್‌ಔಟ್ ನೋಟಿಸ್
ಹೊರಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.