ADVERTISEMENT

ವಿಮಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣ: ಮೇಲ್ಮನವಿ ಸಮಿತಿ ರಚಿಸಲು ಹೈಕೋರ್ಟ್ ಸೂಚನೆ

ಪಿಟಿಐ
Published 23 ಮಾರ್ಚ್ 2023, 13:24 IST
Last Updated 23 ಮಾರ್ಚ್ 2023, 13:24 IST
.
.   

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣದ ಆರೋಪಿ ಶಂಕರ್‌ ಮಿಶ್ರಾ ಅವರ ಮೇಲ್ಮನವಿಯ ವಿಚಾರಣೆಗಾಗಿ ಮೇಲ್ಮನವಿ ಸಮಿತಿ ರಚಿಸುವಂತೆ ದೆಹಲಿ ಹೈಕೋರ್ಟ್‌ ಗುರುವಾರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಎ) ನಿರ್ದೇಶನ ನೀಡಿದೆ.

‘ಸಮಿತಿಯನ್ನು ಎರಡು ವಾರಗಳೊಳಗೆ ರಚಿಸಬೇಕು’ ಎಂದು ಸೂಚಿಸಿದ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್‌, ಎರಡು ವಾರಗಳೊಳಗೆ ಸಮಿತಿಗೆ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡಿದರು.

ವಿಚಾರಣೆಯು ಏಪ್ರಿಲ್‌ 20ರಂದು ನಡೆಯಲಿದೆ ಎಂದೂ ಹೈಕೋರ್ಟ್ ಹೇಳಿದೆ. ತಮ್ಮ ಮೇಲ್ಮನವಿಯನ್ನು ತ್ವರಿತವಾಗಿ ವಿಚಾರಣೆ ನಡೆಸಲು ಮೇಲ್ಮನವಿ ಸಮಿತಿ ರಚಿಸಬೇಕೆಂದು ಕೋರಿ ಮಿಶ್ರಾ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ಆರೋಪಿ ಶಂಕರ್‌ ಮಿಶ್ರಾ ಅವರಿಗೆ ದೆಹಲಿಯ ನ್ಯಾಯಾಲಯವು ಜನವರಿ 31ರಂದು ಜಾಮೀನು ಮಂಜೂರು ಮಾಡಿತ್ತು.

ಕಳೆದ ವರ್ಷದ ನವೆಂಬರ್ 26ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಮದ್ಯದ ಅಮಲಿನಲ್ಲಿದ್ದ ಆರೋಪಿ ಶಂಕರ್‌ ಮಿಶ್ರಾ ಮೂತ್ರ ವಿಸರ್ಜನೆ ಮಾಡಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.