ADVERTISEMENT

ಚೀನಾಕ್ಕೆ ಮತ್ತೆ ಬಿಸಿ ಮುಟ್ಟಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್

ಟಿಬೆಟ್‌ ದೇಶಭ್ರಷ್ಟ ಸರ್ಕಾರದ ಅಧ್ಯಕ್ಷನಿಗೆ ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ಆತಿಥ್ಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 19:38 IST
Last Updated 16 ಅಕ್ಟೋಬರ್ 2020, 19:38 IST
ಲಾಬ್ಸಾಂಗ್‌ ಮತ್ತು ರಾಬರ್ಟ್‌ ಡೆಸ್ಟ್ರೊ - ಟ್ವಿಟರ್‌ ಚಿತ್ರ
ಲಾಬ್ಸಾಂಗ್‌ ಮತ್ತು ರಾಬರ್ಟ್‌ ಡೆಸ್ಟ್ರೊ - ಟ್ವಿಟರ್‌ ಚಿತ್ರ   

ನವದೆಹಲಿ: ದೇಶಭ್ರಷ್ಟ ಟಿಬೆಟ್‌ ಸರ್ಕಾರದ ಮುಖ್ಯಸ್ಥರನ್ನು ಅಮೆರಿಕದ ವಿದೇಶಾಂಗ ಸಚಿವಾಲಯವು ಇದೇ ಮೊದಲ ಬಾರಿಗೆ ಸರ್ಕಾರಿ ಅತಿಥಿ ಎಂದು ಪರಿಗಣಿಸಿದೆ. ಭಾರತದಲ್ಲಿ ನೆಲೆಯಾಗಿರುವ ಟಿಬೆಟ್‌ ದೇಶಭ್ರಷ್ಟ ಸರ್ಕಾರಕ್ಕೆ ಈ ಮೂಲಕ ಮನ್ನಣೆ ನೀಡಿದೆ. ಇದು ಚೀನಾಕ್ಕೆ ಅಮೆರಿಕ ನೀಡಿದ ಮತ್ತೊಂದು ಸಂದೇಶ ಎನ್ನಲಾಗಿದೆ.

ಟಿಬೆಟ್‌ಗೆ ಸಂಬಂಧಿಸಿ ಅಮೆರಿಕದ ವಿಶೇಷ ಸಂಯೋಜಕ ರಾಬರ್ಟ್‌ ಎ. ಡೆಸ್ಟ್ರೊ ಅವರು ಟಿಬೆಟ್‌ ದೇಶಭ್ರಷ್ಟ ಸರ್ಕಾರದ ಅಧ್ಯಕ್ಷ ಲಾಬ್ಸಾಂಗ್‌ ಸಾಂಗೇ ಅವರ ಜತೆಗೆ ಮಾತುಕತೆ ನಡೆಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ರಾಬರ್ಟ್‌ ಅವರನ್ನು ವಿಶೇಷ ಸಂಯೋಜಕರಾಗಿ ಕಳೆದ ವಾರ ನೇಮಿಸಿದ್ದರು. ಈ ನೇಮಕಕ್ಕೆ ಚೀನಾ ಬಲವಾದ ಪ್ರತಿಭಟನೆ ದಾಖಲಿಸಿತ್ತು.ಇದು ತನ್ನ ಆಂತರಿಕ ವ್ಯವಹಾರಗಳಲ್ಲಿ ಅಮೆರಿಕದ ಹಸ್ತಕ್ಷೇಪ ಎಂದೂ ಆಕ್ಷೇಪ ವ್ಯಕ್ತಪಡಿಸಿತ್ತು.

ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಎಚ್‌.ಡಬ್ಲ್ಯು ಬುಷ್‌, ಬಿಲ್‌ ಕ್ಲಿಂಟನ್‌, ಜಾರ್ಜ್‌ ಬುಷ್‌ ಮತ್ತು ಬರಾಕ್ ಒಬಾಮ ಅವರು ಟಿಬೆಟ್‌ನ ಅಧ್ಯಾತ್ಮ ನಾಯಕ ದಲೈ ಲಾಮಾ ಅವರಿಗೆ ಶ್ವೇತಭವನದಲ್ಲಿ ಆತಿಥ್ಯ ನೀಡಿದ್ದರು. ಆದರೆ, ಟಿಬೆಟ್‌ನಲ್ಲಿ ಚೀನಾದ ಆಳ್ವಿಕೆಯ ಪ್ರತಿರೋಧದ ಸಂಕೇತವಾಗಿರುವ ದಲೈಲಾಮಾ ಅವರ ಜತೆಗೆ ಟ್ರಂಪ್‌ ಅವರು ಯಾವುದೇ ಸಭೆ ನಡೆಸಿಲ್ಲ.

ADVERTISEMENT

ಟ್ರಂಪ್‌ ಅವರು ಈಗ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಂತೆ ಕಾಣಿಸುತ್ತಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ವಾರಗಳ ಮೊದಲು ಲಾಬ್ಸಾಂಗ್ ಅವರಿಗೆ ವಿದೇಶಾಂಗ ಸಚಿವಾಲಯವು ಆತಿಥ್ಯ ನೀಡಿದೆ. ಇದರಿಂದಾಗಿ, ಭಾರತ, ಅಮೆರಿಕ ಮತ್ತು ಜಗತ್ತಿನ ಇತರ ದೇಶಗಳಲ್ಲಿ ಇರುವ ದೇಶಭ್ರಷ್ಟ ಟಿಬೆಟಿಯನ್ನರು ಆಯ್ಕೆ ಮಾಡಿದ ಸರ್ಕಾರಕ್ಕೆ ಪರೋಕ್ಷವಾಗಿ ಮಾನ್ಯತೆ ನೀಡಿದಂತಾಗಿದೆ.

ಕೇಂದ್ರೀಯ ಟಿಬೆಟ್‌ ಸರ್ಕಾರ ಎಂದು ಔಪಚಾರಿಕವಾಗಿ ಕರೆಯಲಾಗುವ ಟಿಬೆಟ್‌ ದೇಶಭ್ರಷ್ಟ ಸರ್ಕಾರವನ್ನು ದಲೈ ಲಾಮಾ ಅವರು 1959ರ ಏಪ್ರಿಲ್‌ 29ರಂದು ಸ್ಥಾಪಿಸಿದ್ದರು. 1950–51ರಲ್ಲಿ ಚೀನಾದ ಸೇನೆಯು ಟಿಬೆಟ್‌ ಅನ್ನು ಆಕ್ರಮಿಸಿಕೊಂಡ ಬಳಿಕ ದಲೈ ಲಾಮಾ ಅವರು ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದರು. ಭಾರತಕ್ಕೆ ಬಂದ ಕೆಲವೇ ವಾರಗಳಲ್ಲಿ ಈ ಸರ್ಕಾರವನ್ನು ಅವರು ಸ್ಥಾಪಿಸಿದ್ದರು. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಈ ಸರ್ಕಾರದ ಕೇಂದ್ರ ಸ್ಥಾನ ಇದೆ. ‘ಸ್ವತಂತ್ರ ಟಿಬೆಟ್‌ ಸರ್ಕಾರದ ಮುಂದುವರಿದ ಭಾಗ’ ಎಂದು ಈ ಸರ್ಕಾರವನ್ನು ಪರಿಗಣಿಸಲಾಗುತ್ತದೆ.

ಅಮೆರಿಕವು ಈ ವರ್ಷ ಟಿಬೆಟ್‌ ಸರ್ಕಾರಕ್ಕೆ ನೇರವಾಗಿ ಹಣಕಾಸಿನ ನೆರವು ನೀಡಿತ್ತು. ಈ ನಡೆ ಕೂಡ ಚೀನಾದ ಆಕ್ರೋಶಕ್ಕೆ ಕಾರಣವಾಗಿತ್ತು.

ಅಮೆರಿಕ ಮತ್ತು ಚೀನಾದ ನಡುವಣ ಸಂಬಂಧ ವಿಷಮಗೊಂಡ ಬಳಿಕ ಟಿಬೆಟ್‌ ಸರ್ಕಾರವನ್ನು ಅಮೆರಿಕ ಸರ್ಕಾರವು ಬೆಂಬಲಿಸುವ ಪ್ರಮಾಣವು ಹೆಚ್ಚಾಗಿದೆ. ಟ್ರಂಪ್‌ ಮತ್ತು ಅಮೆರಿಕದ ಹಿರಿಯ ಅಧಿಕಾರಿಗಳು ಚೀನಾದ ವಿರುದ್ಧ ಕಳೆದ ಕೆಲ ತಿಂಗಳಿನಿಂದ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಚೀನಾದ ಯುದ್ಧೋನ್ಮಾದವನ್ನು ಟೀಕಿಸಿದ್ದಾರೆ. ಭಾರತದ ಗಡಿಯಲ್ಲಿ ಮಾತ್ರವಲ್ಲದೆ, ದಕ್ಷಿಣ ಚೀನಾ ಸಮುದ್ರ, ಪೂರ್ವ ಚೀನಾ ಸಮುದ್ರ ಮತ್ತು ತೈವಾನ್‌ ಖಾರಿಯಲ್ಲಿ ಚೀನಾದ ಅತಿಕ್ರಮಣಕಾರಿ ಮನೋಭಾವಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭಾರತದ ಮೇಲೂ ಒತ್ತಡ

ಟಿಬೆಟ್‌ ದೇಶಭ್ರಷ್ಟ ಸರ್ಕಾರವನ್ನು ಹೊರದಬ್ಬಬೇಕು ಎಂದು ಭಾರತದ ಮೇಲೆ ಚೀನಾ ಭಾರಿ ಒತ್ತಡ ಹೇರಿದೆ. ಆದರೆ, ಈ ಸರ್ಕಾರಕ್ಕೆ ಭಾರತ ಮಾನ್ಯತೆ ನೀಡದೇ ಇದ್ದರೂ ಅದರ ಕಾರ್ಯನಿರ್ವಹಣೆಗೆ ಅವಕಾಶ ಕೊಟ್ಟಿದೆ. ಪೂರ್ವ ಲಡಾಖ್‌ನ ಗಡಿಯಲ್ಲಿ ಭಾರತ ಮತ್ತು ಚೀನಾದ ಸೇನೆಗಳು ಮುಖಾಮುಖಿಯಾಗಿರುವ ಸಂದರ್ಭದಲ್ಲಿಯೂ ಭಾರತ ತನ್ನ ನಿಲುವನ್ನು ಮೃದುಗೊಳಿಸಿಲ್ಲ. ಟಿಬೆಟ್‌ ಸರ್ಕಾರದ ಮುಖ್ಯಸ್ಥನ ಆಯ್ಕೆಗೆ ಮುಂದಿನ ವರ್ಷ ಚುನಾವಣೆ ನಡೆಸಲು ‘ಅನಧಿಕೃತ ಒಪ್ಪಿಗೆ’ ಕೊಟ್ಟಿದೆ.

***

ಕೇಂದ್ರೀಯ ಟಿಬೆಟ್‌ ಸರ್ಕಾರವನ್ನು ಇತರ ಸರ್ಕಾರಗಳ ರೀತಿಯಲ್ಲಿಯೇ ಅಮೆರಿಕದ ವಿದೇಶಾಂಗ ಸಚಿವಾಲಯ ನಡೆಸಿಕೊಂಡಿದೆ. ಇದು ಟಿಬೆಟಿಯನ್ನರಿಗೆ ಬಹುದೊಡ್ಡ ಗೆಲುವು

-ಲಾಬ್ಸಾಂಗ್‌ ಸಾಂಗೇ, ಟಿಬೆಟ್‌ ದೇಶಭ್ರಷ್ಟ ಸರ್ಕಾರದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.