ನವದೆಹಲಿ: ಅಮೆರಿಕದಲ್ಲಿನ ಉನ್ನತ ಶಿಕ್ಷಣ ಅವಕಾಶಗಳ ಕುರಿತು ಅಧಿಕೃತ ಮಾಹಿತಿ ನೀಡುವ ‘ಎಜುಕೇಷನ್ ಯುಎಸ್‌ಎ’ ಸಂಸ್ಥೆಯು ಬೆಂಗಳೂರು ಸೇರಿದಂತೆ ದೇಶದ ಎಂಟು ನಗರಗಳಲ್ಲಿ 'ಯುಎಸ್‌ನಲ್ಲಿ ಅಧ್ಯಯನ' ಶಿಕ್ಷಣ ಮೇಳವನ್ನು ಆಯೋಜಿಸಿದೆ.
ಬೆಂಗಳೂರಿನ ಹೆಬ್ಬಾಳದಲ್ಲಿರುವ ಹೊಟೇಲ್ ಹಯಾಟ್ ಸೆಂಟ್ರಿಕ್‌ನಲ್ಲಿ ಆಗಸ್ಟ್ 10ರಂದು ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ ಮೇಳ ನಡೆಯಲಿದೆ. ಈ ಮೇಳದಲ್ಲಿ ಮಾನ್ಯತೆ ಪಡೆದ 50ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಭಾಗವಹಿಸಲಿದ್ದು, ಅಮೆರಿಕದ ಸಂಸ್ಥೆಗಳ ಅಧಿಕೃತ ಪ್ರತಿನಿಧಿಗಳನ್ನು ಭೇಟಿಯಾಗುವ ಅಪೂರ್ವ ಅವಕಾಶ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ದೊರೆಯಲಿದೆ.
ಮೇಳದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದ್ದು, ನೋಂದಣಿ ಕಡ್ಡಾಯ. ಆಸಕ್ತರು ವೆಬ್‌ಸೈಟ್‌ನಲ್ಲಿ (https://bit.ly/EdUSAFair25EMB) ನೋಂದಾಯಿಸಿಕೊಳ್ಳಬಹುದು.
ಅಮೆರಿಕದಲ್ಲಿ ಶಿಕ್ಷಣ ಪಡೆಯಲು ಬಯಸುವ ಪದವಿ, ಸ್ನಾತಕೋತ್ತರ ಅಥವಾ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ನೇರ ಸಲಹೆ ಮತ್ತು ಮಾರ್ಗದರ್ಶನ ಪಡೆಯುವ ಅಮೂಲ್ಯ ಅವಕಾಶವು ಮೇಳದಲ್ಲಿ ಲಭ್ಯವಾಗಲಿದೆ. ವಿಶ್ವವಿದ್ಯಾಲಯದ ಅಧಿಕಾರಿಗಳು, ಎಜುಕೇಶನ್ ಯುಎಸ್‌ಎ ಸಲಹೆಗಾರರು ಮತ್ತು ಅಮೇರಿಕ ರಾಯಭಾರ ಕಚೇರಿಯ ಪ್ರತಿನಿಧಿಗಳೊಂದಿಗೆ ನೇರವಾಗಿ ಸಂವಾದ ನಡೆಸುವ ಮೂಲಕ ವಿಶ್ವಾಸಾರ್ಹ ಮಾಹಿತಿಯನ್ನು ಪಡೆಯಬಹುದು.
ಶೈಕ್ಷಣಿಕ ಕಾರ್ಯಕ್ರಮಗಳು, ಅರ್ಜಿ ಸಲ್ಲಿಕೆ ಪ್ರಕ್ರಿಯೆಗಳು, ವಿದ್ಯಾರ್ಥಿವೇತನಗಳು, ಅರ್ಹತೆ ಹಾಗೂ ಅಮೆರಿಕದ ಕ್ಯಾಂಪಸ್ ಜೀವನ ಕುರಿತು ತಜ್ಞರ ನೇತೃತ್ವದಲ್ಲಿ ವಿಶೇಷ ಸಂವಾದಗಳು ನಡೆಯಲಿವೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಕಲೆ, ವ್ಯವಹಾರ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಒಳಗೊಂಡಿರುವ ಈ ಮೇಳವು, ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಭಾರತೀಯ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿ ನೀಡುವ ಉದ್ದೇಶವನ್ನು ಹೊಂದಿದೆ.
ಆಗಸ್ಟ್ 9 ರಂದು ಚೆನ್ನೈಯಲ್ಲಿ ಆರಂಭಗೊಳ್ಳಲಿರುವ ಮೇಳವು ಆಗಸ್ಟ್ 17ರಂದು ಪುಣೆಯಲ್ಲಿ ಕೊನೆಗೊಳ್ಳಲಿದೆ.
ಎಜುಕೇಷನ್ ಯುಎಸ್‌ಎ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.educationusa.in ಗೆ ಭೇಟಿ ನೀಡಬಹುದು ಅಥವಾ india@educationusa.org ಮೂಲಕ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.