ADVERTISEMENT

ಭಾರತದಿಂದ ಆಮದಾಗುವ ಗೋಮಾಂಸ ಸೇರಿ ಈ ಉತ್ಪನ್ನಗಳಿಗೆ ಅಮೆರಿಕದಲ್ಲಿ ಸುಂಕ ವಿನಾಯಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2026, 10:24 IST
Last Updated 21 ಫೆಬ್ರುವರಿ 2026, 10:24 IST
   

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಲವು ದೇಶಗಳ ಆಮದು ಸರಕುಗಳ ಮೇಲೆ ಹೇರಿದ್ದ ವ್ಯಾಪಕ ಸುಂಕಗಳನ್ನು ರದ್ದು ಮಾಡಿ ಶುಕ್ರವಾರ ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪಿನ ಬೆನ್ನಲ್ಲೇ, ಟ್ರಂಪ್ 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ ಎಲ್ಲ ದೇಶಗಳ ಮೇಲೆ ಶೇ 10 ರಷ್ಟು ಸುಂಕವನ್ನು ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಅಲ್ಲದೇ, ಸದ್ಯ ವಿವಿಧ ದೇಶಗಳ ಮೇಲೆ ಅಸ್ತಿತ್ವದಲ್ಲಿರುವ ಸುಂಕಗಳನ್ನು ರದ್ದುಗೊಳಿಸುವ ಆದೇಶಕ್ಕೂ ಸಹಿ ಹಾಕಿದ್ದಾರೆ.

ಫೆಬ್ರುವರಿ 24ರಿಂದ ಈ ಆದೇಶ ಜಾರಿಗೆ ಬರಲಿದ್ದು, ಇದರೊಂದಿಗೆ ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳು ಶೇ 10ರಷ್ಟು ಕಡಿಮೆ ಪ್ರತಿಸುಂಕ ಎದುರಿಸಬೇಕಾಗುತ್ತದೆ. ಸದ್ಯ, ಈವರೆಗೆ ಇದು ಶೇ 18ರಷ್ಟಿತ್ತು.

‘ಫೆಬ್ರುವರಿ 24ರಿಂದ ಜಾರಿಗೆ ಬರುವಂತೆ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ 150 ದಿನಗಳ ಅವಧಿಗೆ ಶೇ10ರಷ್ಟು ತಾತ್ಕಾಲಿಕ ಆಮದು ಸುಂಕವನ್ನು ವಿಧಿಸುತ್ತಿದ್ದೇನೆ’ಎಂದು ಟ್ರಂಪ್ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಹಾಗಿದ್ದರೆ, ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಎಲ್ಲ ಸರಕುಗಳ ಮೇಲೆ ಸುಂಕ ವಿಧಿಸಲಾಗುತ್ತಿದೆಯೇ? ಅಥವಾ ಯಾವ ಸರಕುಗಳಿಗಾದರೂ ವಿನಾಯಿತಿ ಇದೆಯೇ ಎಂಬ ಮಾಹಿತಿ ಇಲ್ಲಿದೆ.

ಯಾವ ಉತ್ಪನ್ನಗಳಿಗೆ ಸುಂಕದಿಂದ ವಿನಾಯಿತಿ ನೀಡಲಾಗಿದೆ?

ಶ್ವೇತಭವನದ ಫ್ಯಾಕ್ಟ್ ಶೀಟ್ ಪ್ರಕಾರ, ಅಮೆರಿಕದ ಆರ್ಥಿಕತೆಯ ಅಗತ್ಯತೆಗಳಿಂದಾಗಿ ಕೆಲವು ಸರಕುಗಳು ತಾತ್ಕಾಲಿಕ ಶೇ10ರಷ್ಟು ಸುಂಕಗಳ ಅಡಿಯಲ್ಲೂ ಬರುವುದಿಲ್ಲ. ಈ ಸರಕುಗಳ ಪೈಕಿ ಕೆಲವು ನಿರ್ಣಾಯಕ ಖನಿಜಗಳು, ಕರೆನ್ಸಿಯಲ್ಲಿ ಬಳಸುವ ಲೋಹ ಮತ್ತು ಚಿನ್ನದ ಜೊತೆ ಬಳಸುವ ಲೋಹಗಳು, ಶಕ್ತಿ ಮತ್ತು ಇಂಧನ ಉತ್ಪನ್ನಗಳು ಸೇರಿವೆ.

ಇದಲ್ಲದೆ, ಅಮೆರಿಕದಲ್ಲಿ ಬೆಳೆಯಲು, ಗಣಿಗಾರಿಕೆ ಮಾಡಲು ಅಥವಾ ಬೇರೆ ರೀತಿಯಲ್ಲಿ ಉತ್ಪಾದಿಸಲು ಸಾಧ್ಯವಾಗದ ಅಥವಾ ದೇಶೀಯ ಬೇಡಿಕೆಯನ್ನು ಪೂರೈಸಲು ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲು, ಗಣಿಗಾರಿಕೆ ಮಾಡಲು ಅಥವಾ ಬೇರೆ ರೀತಿಯಲ್ಲಿ ಉತ್ಪಾದಿಸಲು ಸಾಧ್ಯವಾಗದ ನೈಸರ್ಗಿಕ ಸಂಪನ್ಮೂಲಗಳು ಮತ್ತು ರಸಗೊಬ್ಬರಗಳಿಗೆ ಸಹ ಸುಂಕ ವಿನಾಯಿತಿ ನೀಡಲಾಗಿದೆ ಎಂದು ಶ್ವೇತಭವನದ ಫ್ಯಾಕ್ಟ್ ಶೀಟ್ ಹೇಳಿದೆ.

ಗೋಮಾಂಸ, ಟೊಮೆಟೊ, ಕಿತ್ತಳೆ ಸೇರಿದಂತೆ ಕೆಲವು ಕೃಷಿ ಉತ್ಪನ್ನಗಳು, ಔಷಧಗಳು ಮತ್ತು ಔಷಧೀಯ ಪದಾರ್ಥಗಳು ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೂ ವಿನಾಯಿತಿ ನೀಡಲಾಗಿದೆ.

ಇದಲ್ಲದೆ, ಪ್ರಯಾಣಿಕ ವಾಹನಗಳು, ಕೆಲವು ಲಘು ಟ್ರಕ್‌ಗಳು, ಕೆಲವು ಮಧ್ಯಮ ಮತ್ತು ಭಾರೀ ವಾಹನಗಳು, ಬಸ್‌ಗಳು ಮತ್ತು ಬಿಡಿಭಾಗಗಳು ಹಾಗೂ ವೈಮಾನಿಕ ಉತ್ಪನ್ನಗಳು, ಪುಸ್ತಕಗಳು, ದೇಣಿಗೆಗೆ ಶುಲ್ಕ ವಿನಾಯಿತಿ ಇದೆ.

ಕೆಲವು ಭಾರತೀಯ ಉತ್ಪನ್ನಗಳ ಮೇಲಿನ ಅಧಿಕ ಸುಂಕ ಮುಂದುವರಿಕೆ

ಭಾರತೀಯ ಉತ್ಪನ್ನಗಳ ಮೇಲೆ ಈಗ ಶೇ 10ರಷ್ಟು ಸುಂಕ ವಿಧಿಸಲಾಗುತ್ತಿದೆಯಾದರೂ ಉಕ್ಕು, ಅಲ್ಯೂಮಿನಿಯಂ, ತಾಮ್ರದ ಮೇಲೆ ಶೇ 50ರಷ್ಟು ಸುಂಕ ಮುಂದುವರಿಯುತ್ತದೆ. ಕೆಲವು ಆಟೊಮೊಬೈಲ್ ಬಿಡಿಭಾಗಗಳ ಮೇಲೆ ಶೇ 25ರಷ್ಟು ಸುಂಕ ಮುಂದುವರಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.