
ನವದೆಹಲಿ: ಆಹಾರ ಮತ್ತು ಕೃಷಿ ದೇಶದ ಮುಖ್ಯ ವಿಚಾರಗಳು. ಅಮೆರಿಕ ಮತ್ತು ಭಾರತ ನಡುವಿನ ವ್ಯಾಪಾರ ಒಪ್ಪಂದದ ವೇಳೆ ಈ ಕ್ಷೇತ್ರಗಳ ಹಿತಾಸಕ್ತಿ ಕಾಪಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್‌ಗೆ ಬುಧವಾರ ಭರವಸೆ ನೀಡಿತು.
ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದಿಂದಾಗಿ ಅಮೆರಿಕಕ್ಕೆ ರಫ್ತು ವಿಚಾರದಲ್ಲಿ ಸ್ಪರ್ಧೆ ಹೆಚ್ಚಲಿದೆ ಎಂದೂ ಹೇಳಿದೆ.
ಲೋಕಸಭೆ ಬಳಿಕ ರಾಜ್ಯಸಭೆಯಲ್ಲಿ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯೆಲ್, ವಿರೋಧ ಪಕ್ಷಗಳ ಸಂಸದರ ಗದ್ದಲ ನಡುವೆಯೇ, ಈ ಕುರಿತು ಹೇಳಿಕೆ ನೀಡಿದರು.
‘ಇಂಧನ, ವಿಮಾನಯಾನ, ಡೇಟಾ ಸೆಂಟರ್, ಪರಮಾಣುಶಕ್ತಿಯಂತಹ ಕೆಲ ಕ್ಷೇತ್ರಗಳಲ್ಲಿ ಅಮೆರಿಕ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಈ ಕ್ಷೇತ್ರಗಳನ್ನು ಕೇಂದ್ರೀಕರಿಸಿ ವ್ಯಾಪಾರ ಒಪ್ಪಂದಕ್ಕೆ ಮುಂದಾಗುವುದು ಸಹಜ. ಈ ಒಪ್ಪಂದಲ್ಲಿ ದೇಶದ ಜನರ ಹಿತಾಸಕ್ತಿಯೂ ಅಡಗಿದೆ’ ಎಂದರು.
ಸಚಿವ ಗೋಯೆಲ್ ತಮ್ಮ ಹೇಳಿಕೆ ಪೂರ್ಣಗೊಳಿಸುತ್ತಿದ್ದಂತೆಯೇ, ವಿಷಯ ಪ್ರಸ್ತಾಪಿಸಿದ ವಿಪಕ್ಷಗಳಕ ಸಂಸದರು, ವ್ಯಾಪಾರ ಒಪ್ಪಂದ ಕುರಿತು ಸರ್ಕಾರದಿಂದ ಸ್ಪಷ್ಟೀಕರಣದ ಅಗತ್ಯವಿದೆ ಎಂದರು. ಆದರೆ, ಸಭಾಪತಿ ಸಿ.ಪಿ.ರಾಧಾಕೃಷ್ಣನ್ ಅವರು ವಿಪಕ್ಷಗಳ ಸಂಸದರ ಬೇಡಿಕೆಗೆ ಅವಕಾಶ ನೀಡಲಿಲ್ಲ.
ಶಿಷ್ಟಾಚಾರ ಉಲ್ಲಂಘನೆ: ಕಾಂಗ್ರೆಸ್ ಬಜೆಟ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೇ ಕೇಂದ್ರ ಸಚಿವ ಪೀಯೂಷ್ ಗೋಯೆಲ್ ಅವರು ಸಂಸತ್ ಭವನದ ಹೊರಗೆ ಸುದ್ದಿಗೋಷ್ಠಿ ನಡೆಸಿ ಭಾರತ–ಅಮೆರಿಕ ವ್ಯಾಪಾರ ಒಪ್ಫಂದ ಕುರಿತು ಮಾಹಿತಿ ನೀಡಿದ್ದಾರೆ. ಇದು ಸದನದ ಶಿಷ್ಟಾಚಾರದ ಉಲ್ಲಂಘನೆ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯಸಭೆಯಲ್ಲಿ ಶೂನ್ಯವೇಳೆ ಈ ಕುರಿತು ಕ್ರಿಯಾಲೋಪ ಎತ್ತಿದ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ‘ಅಧಿವೇಶನ ನಡೆಯುತ್ತಿರುವ ವೇಳೆ ನೀತಿಗಳ ಕುರಿತು ಹೊರಗೆ ಹೇಳಿಕೆ ನೀಡಬಾರದು. ಇದು ಈ ವರೆಗೆ ನಡೆದುಕೊಂಡು ಬಂದ ಸಂಪ್ರದಾಯ. ಸಚಿವ ಗೋಯೆಲ್ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಈ ಸಂಪ್ರದಾಯ ಮುರಿದಿದ್ದಾರೆ’ ಎಂದರು. ಕ್ರಿಯಾಲೋಪವನ್ನು ತಿರಸ್ಕರಿಸಿದ ಸಭಾಪತಿ ಸಿ.ಪಿ.ರಾಧಾಕೃಷ್ಣನ್‘ಸಚಿವ ಗೋಯೆಲ್ ಅವರು ಸದನದಲ್ಲಿ ಈ ಕುರಿತು ಬುಧವಾರ ಹೇಳಿಕೆ ನೀಡುವುದು ನಿಗದಿಯಾಗಿತ್ತು. ಸಚಿವರು ಹೇಳಿಕೆ ನೀಡಲಿರುವ ಕಾರಣ ಯಾವುದೇ ಕ್ರಿಯಾಲೋಪವಾಗಿಲ್ಲ’ ಎಂದು ರೂಲಿಂಗ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.