ನವದೆಹಲಿ: 1971ರಲ್ಲಿ ನಡೆದ ಯುದ್ಧದ ವೇಳೆ, ಶಸ್ತ್ರಾಸ್ತ್ರ ಪೂರೈಸುವುದು ಸೇರಿ ಪಾಕಿಸ್ತಾನಕ್ಕೆ ಅಮೆರಿಕ ನೀಡಿದ್ದ ನೆರವಿಗೆ ಸಂಬಂಧಿಸಿದ ಸುದ್ದಿಯೊಂದನ್ನು ಭಾರತ ಮಂಗಳವಾರ ‘ಎಕ್ಸ್’ನಲ್ಲಿ ಹಂಚಿಕೊಂಡಿದೆ.
ಸೇನೆಯ ಪೂರ್ವ ಕಮಾಂಡ್ ಈ ಸುದ್ದಿಯನ್ನು ಹಂಚಿಕೊಂಡಿದ್ದು, ‘1954ರಿಂದಲೂ ಅಮೆರಿಕ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಒದಗಿಸುತ್ತಿದೆ’ ಎಂದು ಹೇಳಿದೆ.
ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವ ಭಾರತದ ವಿರುದ್ಧ ಅಮೆರಿಕ ನಿರಂತರ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ಭಾರತೀಯ ಸೇನೆ ಈ ಸುದ್ದಿ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದೆ.
ಆಗ, ರಕ್ಷಣಾ ಉತ್ಪಾದನಾ ಸಚಿವರಾಗಿದ್ದ ವಿ.ಸಿ.ಶುಕ್ಲಾ ಅವರು ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ, ಪಾಕಿಸ್ತಾನಕ್ಕೆ ಅಮೆರಿಕ ನೆರವು ಒದಗಿಸುತ್ತಿರುವ ಕುರಿತು ನೀಡಿದ್ದ ಹೇಳಿಕೆ ಉಲ್ಲೇಖಿಸಿ ವರದಿ ಪ್ರಕಟವಾಗಿತ್ತು. ವರದಿಯನ್ನು ಸೇನೆ ಈಗ ಹಂಚಿಕೊಂಡಿದೆ. ಪಾಕಿಸ್ತಾನಕ್ಕೆ ಅಮೆರಿಕ ಒದಗಿಸುತ್ತಿದ್ದ ಶಸ್ತ್ರಾಸ್ತ್ರಗಳ ಮೌಲ್ಯ ಕುರಿತು ಶುಕ್ಲಾ ಅವರು ನೀಡಿದ್ದ ಹೇಳಿಕೆಯೂ ಸುದ್ದಿಯಲ್ಲಿ ಉಲ್ಲೇಖವಾಗಿತ್ತು.
‘#ಇಂಡಿಯನ್‌ಆರ್ಮಿ’, ‘#ಈಸ್ಟರ್ನ್‌ಕಮಾಂಡ್’, ‘#ವಿಜಯವರ್ಷ’, ‘#ಲಿಬರೇಷನ್ಆಫ್‌ಬಾಂಗ್ಲಾದೇಶ’ ಹಾಗೂ ‘#ಮೀಡಿಯಾಹೈಲೈಟ್ಸ್’ ಎಂಬುದಾಗಿ ಹ್ಯಾಷ್‌ಟ್ಯಾಗ್‌ನೊಂದಿಗೆ ಸೇನೆ ಸುದ್ದಿ ಹಂಚಿಕೊಂಡಿದೆ. ‘ಈ ದಿನ ಆ ವರ್ಷ. 1971ರ ಆಗಸ್ಟ್ 5ರಂದು ಯುದ್ಧ ನಡೆಯುತ್ತಿತ್ತು. 1954ರಿಂದ ಪಾಕಿಸ್ತಾನಕ್ಕೆ ಅಮೆರಿಕ ₹17 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ ಎಂದು’ ಎಂದು ಸೇನೆ ಪೋಸ್ಟ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.