ADVERTISEMENT

ಇರಾನ್‌ ಮೇಲೆ ಅಮೆರಿಕ ನಿರ್ಬಂಧ: ಭಾರತದ ಬಂದರು ಯೋಜನೆಗೆ ಅಡ್ಡಿಯಿಲ್ಲ; ಜೈಶಂಕರ್‌

ಪಿಟಿಐ
Published 10 ಡಿಸೆಂಬರ್ 2021, 15:56 IST
Last Updated 10 ಡಿಸೆಂಬರ್ 2021, 15:56 IST
ಎಸ್‌.ಜೈಶಂಕರ್‌
ಎಸ್‌.ಜೈಶಂಕರ್‌   

ನವದೆಹಲಿ: ಇರಾನ್‌ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳಿಂದ ಭಾರತದ ಚಬಹಾರ್‌ ಬಂದರು ಯೋಜನೆಗೆ ಯಾವುದೇ ಅಡ್ಡಿಯುಂಟಾಗುವುದಿಲ್ಲ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಶುಕ್ರವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ಬಿಎಸ್‌ಪಿ ಸದಸ್ಯ ರಿತೇಶ್‌ ಪಾಂಡೆ ಅವರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಇರಾನ್‌ನಲ್ಲಿ ಭಾರತ ಕೈಗೊಂಡಿರುವ ಚಬಹಾರ್‌ ಬಂದರು ಯೋಜನೆಗಳಿಗೆ ಅಮೆರಿಕ ವಿಧಿಸಿರುವ ನಿರ್ಬಂಧಗಳು ಯಾವುದೇ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ, ಇರಾನ್‌ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳಿಂದ ಅಲ್ಲಿರುವ ಭಾರತದ ಚಬಹಾರ್‌ ಬಂದರು ಯೋಜನೆ ಮೇಲೆ ಯಾವುದಾದರೂ ಪ್ರಭಾವ ಬೀರುತ್ತದೆಯೇ ಎಂದು ಪಾಂಡೆ ಪ್ರಶ್ನಿಸಿದರು.

ADVERTISEMENT

ಅಲ್ಲದೆ ಅಮೆರಿಕ ವಿಧಿಸಿರುವ ನಿರ್ಬಂಧಗಳಿಂದ ಭಾರತದ ಚಬಹಾರ್‌ ಬಂದರು ಯೋಜನೆ ವಿಳಂಬವಾಗಿದೆ ಎಂದು ಇರಾನ್‌ ಸರ್ಕಾರವು ಸಾರ್ವಜನಿಕವಾಗಿ ಹೇಳುತ್ತಿದೆ. ಈ ಯೋಜನೆ ಕೈಗೆತ್ತಿಕೊಳ್ಳಲು ಚೀನಾ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

‘ಬಿಎಸ್‌ಪಿ ಸದಸ್ಯರ ಆರೋಪವು ಸಂಪೂರ್ಣವಾಗಿ ತಪ್ಪಾಗಿದೆ. 2016ರಲ್ಲೇ ಯೋಜನೆಯ ಒಪ್ಪಂದವಾಗಿದೆ. ಯೋಜನೆಯ ಕಾಮಗಾರಿಯನ್ನು 2018ರಿಂದ ಆರಂಭಿಸಲಾಯಿತು. ನಾವು ಈಗಾಗಲೇ 6 ಕ್ರೇನ್‌ಗಳನ್ನು ಪೂರೈಸಿದ್ದೇವೆ. ಟರ್ಮಿನಲ್‌ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಜೈಶಂಕರ್‌ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.