ADVERTISEMENT

ತಾಪಮಾನ ಬದಲಾವಣೆ: ಅಮೆರಿಕ ಅಧ್ಯಕ್ಷರ ವಿಶೇಷ ರಾಯಭಾರಿ –ಪರಿಸರ ಸಚಿವ ಚರ್ಚೆ

ಪಿಟಿಐ
Published 6 ಏಪ್ರಿಲ್ 2021, 11:36 IST
Last Updated 6 ಏಪ್ರಿಲ್ 2021, 11:36 IST
ತಾಪಮಾನ ಬದಲಾವಣೆ ಕುರಿತ ಅಮೆರಿಕ ಅಧ್ಯಕ್ಷರ ವಿಶೇಷ ರಾಯಭಾರಿ ಜಾನ್‌ ಕೆರ್ರಿ ಮತ್ತು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ನವದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿದರು
ತಾಪಮಾನ ಬದಲಾವಣೆ ಕುರಿತ ಅಮೆರಿಕ ಅಧ್ಯಕ್ಷರ ವಿಶೇಷ ರಾಯಭಾರಿ ಜಾನ್‌ ಕೆರ್ರಿ ಮತ್ತು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ನವದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿದರು   

ನವದೆಹಲಿ: ತಾಪಮಾನ ಬದಲಾವಣೆ ಕುರಿತ ಅಮೆರಿಕದ ಅಧ್ಯಕ್ಷರ ವಿಶೇಷ ರಾಯಭಾರಿ ಜಾನ್‌ ಕೆರ್ರಿ ನೇತೃತ್ವದ ನಿಯೋಗ ಮಂಗಳವಾರ ಇಲ್ಲಿ ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್ ಅವರನ್ನು ಭೇಟಿಯಾಗಿ ಚರ್ಚಿಸಿತು.

ತಾಪಮಾನ ಪರಿಸ್ಥಿತಿ, ಜಂಟಿ ಸಂಶೋಧನೆ ಮತ್ತು ಸಹಭಾಗಿತ್ವ ಕುರಿತು ಚರ್ಚೆ ನಡೆಯಿತು. ಏಳು ಸದಸ್ಯರ ನಿಯೋಗ ನಾಲ್ಕು ದಿನ ಪ್ರವಾಸ ಕೈಗೊಳ್ಳಲಿದೆ. ಕೇಂದ್ರ, ಖಾಸಗಿ ವಲಯ ಮತ್ತು ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿಯಾಗಲಿದೆ.

ತಾಪಮಾನ ಬದಲಾವಣೆ ಕುರಿತ ಅಮೆರಿಕದ ವಿಶೇಷ ರಾಯಭಾರಿಯಾಗಿ ಕೆರ್ರಿ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ ಎಂದು ಪರಿಸರ ಸಚಿವಾಲಯದ ಹೇಳಿಕೆ ತಿಳಿಸಿದೆ.

ADVERTISEMENT

ಜನವರಿಯಲ್ಲಿ ಅಮೆರಿಕ ಮತ್ತೆ ಪ್ಯಾರಿಸ್‌ ಒಪ್ಪಂದಕ್ಕೆ ಸೇರ್ಪಡೆ ಆಗಿತ್ತು. ಅಮೆರಿಕ ಅಧ್ಯಕ್ಷ ಜೋ ಬೈಡನ್‌ ತಾಪಮಾನ ಕುರಿತು ವರ್ಚುಯಲ್ ಸಭೆ ಆಯೋಜಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿ ವಿಶ್ವದ ಪ್ರಮುಖ 40 ನಾಯಕರನ್ನು ಆಹ್ವಾನಿಸಿದ್ದಾರೆ. ಕ್ವಾಡ್‌ ಸದಸ್ಯ ರಾಷ್ಟ್ರಗಳ ಸಭೆಯ ನಂತರ, ಪ್ರಧಾನಿ ಮೋದಿ–ಬೈಡನ್‌ ನಡುವಣ ದ್ವಿತೀಯ ಭೇಟಿ ಇದಾಗಲಿದೆ.

ತಾಪಮಾನ ಬದಲಾವಣೆ ಕುರಿತು ಏಪ್ರಿಲ್‌ 22–23ರಂದು ವಿಶ್ವಮುಖಂಡರ ವರ್ಚುಯಲ್‌ ಸಭೆ ನಡೆಯಲಿದ್ದು, ಈ ಕುರಿತು ಮುಖಂಡರು ಚರ್ಚಿಸಿದರು. ಅಲ್ಲದೆ, ಈ ವರ್ಷಾಂತ್ಯದಲ್ಲಿ ಸಿಒಪಿ 26 ಸಭೆಯೂ ನಡೆಯಲಿದೆ.

ತಾಪಮಾನ ಬದಲಾವಣೆ ತಡೆಯುವ ನಿಟ್ಟಿನಲ್ಲಿ ಭಾರತ ಕೈಗೊಂಡಿರುವ ಕ್ರಮಗಳನ್ನು ಬೆಂಬಲಿಸುವುದು ನಮ್ಮ ಆಡಳಿತದ ಮಖ್ಯ ಆದ್ಯತೆಯಾಗಿದೆ. ತಾಪಮಾನ ಬಿಕ್ಕಟ್ಟು ಬಗೆಹರಿಸಲು ಪರಿಹಾರಕ್ಕಾಗಿ ಅಗತ್ಯ ಸಂಶೋಧನೆಗಾಗಿ ಭಾರತವು ಪ‍್ರಮುಖ ಭಾಗಿದಾರಿ ರಾಷ್ಟ್ರವಾಗಿದೆ ಎಂದು ಅಮೆರಿಕ ಭಾವಿಸಲಿದೆ ಎಂದು ಕೆರ್ರಿ ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.

ಅಂತರರಾಷ್ಟ್ರೀಯ ಇಂಧನ ಏಜೆನ್ಸಿ (ಐಇಎ) ವರದಿ ಅನುಸಾರ, ಜಾಗತಿಕವಾಗಿ ವಾತಾವರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇಂಗಾಲದ ಡೈಆಕ್ಸೈಡ್ ಬಿಡುಗಡೆ ಮಾಡುತ್ತಿರುವ ಮೂರನೇ ಅತಿದೊಡ್ಡ ದೇಶವಾಗಿದೆ. ಇದನ್ನು ತಡೆಯುವ ಕ್ರಮವಾಗಿ ಮರುಬಳಕೆ ಇಂಧನದ ಸಾಮರ್ಥ್ಯವನ್ನು 2022ರ ವೇಳೆಗೆ 175 ಜಿಡಬ್ಲ್ಯೂ (ಗಿಗಾವಾಟ್‌) ಸಾಧಿಸುವ ಗುರಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.