ನ್ಯೂಯಾರ್ಕ್/ವಾಷಿಂಗ್ಟನ್/ ನವದೆಹಲಿ: ‘ಭಾರತದ ಸರಕುಗಳಿಗೆ ಸುಂಕವನ್ನು ಗಣನೀಯವಾಗಿ ಏರಿಕೆ ಮಾಡಲಾಗುವುದು’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ಭಾರತದ ಜೊತೆಗೆ ಹೊಸ ವ್ಯಾಪಾರ ಸಮರ ಆರಂಭಿಸಿದ್ದಾರೆ.
‘ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುತ್ತಿರುವ ಭಾರತ, ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿದೆ’ ಎಂದು ಟ್ರಂಪ್ ಈ ವೇಳೆ ಆರೋಪಿಸಿದ್ದಾರೆ.
‘ಭಾರತದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳಿಗೂ ಶೇಕಡ 25ರಷ್ಟು ಸುಂಕ ವಿಧಿಸಲಾಗುವುದು’ ಎಂದು ಟ್ರಂಪ್ ಅವರು ಕಳೆದ ವಾರ ಘೋಷಿಸಿದ್ದರು. ಬೃಹತ್ ಪ್ರಮಾಣದಲ್ಲಿ ರಷ್ಯಾದ ಸೇನಾ ಉಪಕರಣಗಳು, ಕಚ್ಚಾ ತೈಲ ಖರೀದಿಸುತ್ತಿರುವ ಭಾರತದ ಮೇಲೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದರು. ಆದರೆ, ಯಾವ ದಿನಾಂಕದಿಂದ ಈ ನಿರ್ಧಾರ ಜಾರಿಗೆ ಬರಲಿದೆ ಎಂದು ತಿಳಿಸಿರಲಿಲ್ಲ.
‘ಭಾರತವು ದೊಡ್ಡ ಪ್ರಮಾಣದಲ್ಲಿ ರಷ್ಯಾದ ತೈಲವನ್ನು ಮಾತ್ರ ಖರೀದಿಸುತ್ತಿಲ್ಲ, ಖರೀದಿಸಿದ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ದೊಡ್ಡ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿದೆ’ ಎಂದು ಟ್ರಂಪ್ ಸಾಮಾಜಿಕ ಜಾಲತಾಣ ‘ಟ್ರುಥ್’ನಲ್ಲಿ ಬರೆದುಕೊಂಡಿದ್ದಾರೆ.
‘ರಷ್ಯಾದ ಯುದ್ಧ ಟ್ಯಾಂಕರ್‌ಗಳಿಂದ ಉಕ್ರೇನ್‌ನಲ್ಲಿ ಹಲವು ಜನರು ಸಾಯುತ್ತಿದ್ದರೂ ಕೂಡ ಅವರು ಹೆದರುತ್ತಿಲ್ಲ. ಈ ಕಾರಣದಿಂದಲೇ, ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕವನ್ನು ಗಣನೀಯವಾಗಿ ಏರಿಕೆ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಹಿತಾಸಕ್ತಿ ಕಾಯಲು ಬದ್ಧ: ‘ಸುಂಕ ಹೇರುವ ಪರಿಣಾಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದು, ದೇಶದ ಹಿತಾಸಕ್ತಿ ಕಾಯಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಭಾರತ ಪ್ರತಿಕ್ರಿಯೆ ನೀಡಿದೆ.
ಎರಡನೇ ಅತೀ ದೊಡ್ಡ ಖರೀದಿದಾರ: ರಷ್ಯಾದಿಂದ ಭಾರತವು ದೇಶದ ಅಗತ್ಯವಿರುವ ಕಚ್ಚಾತೈಲದ ಪೈಕಿ ಶೇಕಡ 35ರಿಂದ 40ರಷ್ಟು ಖರೀದಿಸುತ್ತಿದೆ. ಉಕ್ರೇನ್ ಜೊತೆಗಿನ ಯುದ್ಧ ಆರಂಭಕ್ಕೂ ಮುನ್ನ ಹೋಲಿಸಿದರೆ, ಆಮದು ಪ್ರಮಾಣವು ಶೇಕಡಾ 0.2ರಷ್ಟು ಏರಿಕೆಯಾಗಿದೆ. ರಷ್ಯಾದಿಂದ ಗರಿಷ್ಠ ಪ್ರಮಾಣದ ಕಚ್ಚಾತೈಲ ಖರೀದಿಯಲ್ಲಿ ಚೀನಾವು ಮೊದಲ ಸ್ಥಾನದಲ್ಲಿದ್ದರೆ, ಭಾರತವು ನಂತರದ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.