
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ದೇಶದ ದೇವಾಲಯಗಳಿಂದ ಅಕ್ರಮವಾಗಿ ಸಾಗಣೆ ಮಾಡಲಾಗಿರುವ ಮೂರು ಪ್ರಾಚೀನ ಕಂಚಿನ ಮೂರ್ತಿಗಳನ್ನು ಅಮೆರಿಕ ಭಾರತಕ್ಕೆ ಹಿಂದಿರುಗಿಸಲಿದೆ.
ಮೂರ್ತಿಗಳನ್ನು ದೇವಾಲಯದಿಂದ ಅಕ್ರಮವಾಗಿ ತೆಗೆಯಲಾಗಿದೆ ಎಂದು ಕಠಿಣ ಮೂಲ ಸಂಶೋಧನೆಯಲ್ಲಿ ಸಾಬೀತಾದ ಹಿನ್ನೆಲೆ ಮೂರು ಮೂರ್ತಿಗಳನ್ನು ಭಾರತ ಸರ್ಕಾರಕ್ಕೆ ಹಿಂದಿರುಗಿಸಲಾಗುವುದು ಎಂದು ವಾಷಿಂಗ್ಟನ್ ಡಿಸಿಯಲ್ಲಿರುವ ಸ್ಮಿತ್‌ಸೋನಿಯನ್‌ನ ರಾಷ್ಟ್ರೀಯ ಏಷ್ಯಾ ಕಲೆಯ ವಸ್ತುಸಂಗ್ರಹಾಲಯ ಬುಧವಾರ ತಿಳಿಸಿದೆ.
ಕ್ರಿ.ಶ 990ರ ಚೋಳರ ಕಾಲದ ‘ಶಿವ ನಟರಾಜ’, 12ನೇ ಶತಮಾನದ ಚೋಳರ ಕಾಲದ 'ಸೋಮಸ್ಕಂದ’ ಮತ್ತು ವಿಜಯನಗರ ಕಾಲದ 16ನೇ ಶತಮಾನದ 'ಪರವೈ ಜೊತೆಗಿನ ಸಂತ ಸುಂದರರ್' ಶಿಲ್ಪವೂ ಸೇರಿದೆ.
ಆದರೆ, ವಸ್ತುಸಂಗ್ರಹಾಲಯವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಭಾರತ ಸರ್ಕಾರವು ಒಂದು ಮೂರ್ತಿಯನ್ನು ದೀರ್ಘಾವಧಿಯ ಸಾಲದ ಮೇಲೆ ಇರಿಸಲು ಒಪ್ಪಿಕೊಂಡಿದೆ. ಇದು ಅದರ ಮೂಲ, ತೆಗೆಯುವಿಕೆ ಮತ್ತು ಹಿಂದಿರುಗಿಸುವಿಕೆಯ ಸಂಪೂರ್ಣ ವಿವರವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಮತ್ತು ಮೂಲ ಸಂಶೋಧನೆಗೆ ವಸ್ತುಸಂಗ್ರಹಾಲಯದ ಬದ್ಧತೆಯನ್ನು ಒತ್ತಿಹೇಳಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದೆ.
ಈ ಮೂರ್ತಿಗಳು ದಕ್ಷಿಣ ಭಾರತದ ಕಂಚಿನ ಎರಕದ ಶ್ರೀಮಂತ ಕಲಾತ್ಮಕತೆಯನ್ನು ಪ್ರದರ್ಶಿಸುತ್ತವೆ. ಮೂಲತಃ ಇವುಗಳು ದೇವಾಲಯದ ಮೆರವಣಿಗೆಗಳಲ್ಲಿ ಸಾಂಪ್ರದಾಯಿಕವಾಗಿ ಬಳಸುವ ಪವಿತ್ರ ವಸ್ತುಗಳಾಗಿದ್ದವು ಎಂದು ವರದಿ ತಿಳಿಸಿದೆ.
ದೀರ್ಘಾವಧಿಯ ಸಾಲದ ಮೇಲೆ ಇರಿಸಲಾಗುವ 'ಶಿವ ನಟರಾಜ' ಮೂರ್ತಿಯನ್ನು ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಹಿಮಾಲಯದ ಕಲೆಗಳ ಬಗ್ಗೆ ಅರಿವು ಮೂಡಿಸುವ ಕಲೆ' ಪ್ರದರ್ಶನದ ಭಾಗವಾಗಿ ಪ್ರದರ್ಶಿಸಲಾಗುವುದು ಎಂದು ಹೇಳಿಕೆ ತಿಳಿಸಿದೆ.
ವಸ್ತುಸಂಗ್ರಹಾಲಯ ಮತ್ತು ಭಾರತದ ರಾಯಭಾರ ಕಚೇರಿ ನಿಕಟ ಸಂಪರ್ಕದಲ್ಲಿದ್ದು, ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿವೆ.
ರಾಷ್ಟ್ರೀಯ ಏಷ್ಯಾ ಕಲೆಯ ವಸ್ತುಸಂಗ್ರಹಾಲಯದ ಸಮರ್ಪಿತ ಮೂಲ ತಂಡ ಮತ್ತು ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ಕಲೆಯ ಮೇಲ್ವಿಚಾರಕರು, ಪುದುಚೇರಿರಿಯ ಫ್ರೆಂಚ್ ಸಂಸ್ಥೆಯ ಫೋಟೊ ಆರ್ಕೈವ್ಸ್ ಮತ್ತು ಪ್ರಪಂಚದಾದ್ಯಂತದ ಹಲವಾರು ಸಂಸ್ಥೆಗಳು, ವ್ಯಕ್ತಿಗಳ ಬೆಂಬಲದೊಂದಿಗೆ ಈ ಮೂರ್ತಿಗಳ ವಾಪಸಾತಿ ಸಾಧ್ಯವಾಯಿತು ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.