ADVERTISEMENT

ಅಮೆರಿಕದಲ್ಲೇ ನೆಲೆ: ಗ್ರೀನ್‌ ಕಾರ್ಡ್‌ ಉಳ್ಳವರಿಗೆ ಸಮನ್ವಯ ಪ್ಯಾಕೇಜ್‌?

ಪಿಟಿಐ
Published 13 ಸೆಪ್ಟೆಂಬರ್ 2021, 11:50 IST
Last Updated 13 ಸೆಪ್ಟೆಂಬರ್ 2021, 11:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್: ಅಮೆರಿಕ ಸಂಸತ್ತಿನಲ್ಲಿ ಮಂಡಿಸಲಾದ ಮಸೂದೆಗೆ ಅಂಗೀಕಾರ ದೊರೆತು ಕಾಯ್ದೆಯಾದರೆ ಅಲ್ಲಿ ಕಾನೂನು ಪ್ರಕಾರ ಶಾಶ್ವತವಾಗಿ ನೆಲೆಸುವ, ಸದ್ಯ ಗ್ರೀನ್‌ ಕಾರ್ಡ್ ಹೊಂದಿರುವ ಅಸಂಖ್ಯ ಜನರ ಕನಸು ನನಸಾಗಲಿದೆ.

ಗ್ರೀನ್‌ಕಾರ್ಡ್ ಪಡೆದು ವರ್ಷಗಳಿಂದ ನೆಲೆಸಿರುವ ಉದ್ಯೋಗಿಗಳಲ್ಲಿ ಗಮನಾರ್ಹ ಸಂಖ್ಯೆಯ ಭಾರತೀಯರಿದ್ದಾರೆ. ನಿಗದಿತ ಶುಲ್ಕ ಪಾವತಿಸಿ ಶಾಶ್ವತವಾಗಿ ನೆಲೆಸಲು ಅವಕಾಶ ಕಲ್ಪಿಸುವ ಸಮನ್ವಯ ಪ್ಯಾಕೇಜ್‌ ಅನ್ನು ಉದ್ದೇಶಿತ ಮಸೂದೆ ಒಳಗೊಂಡಿದೆ.

ಇದು ಕಾಯ್ದೆಯಾಗಿ ಜಾರಿಯಾದರೆ ಸದ್ಯ ಗ್ರೀನ್ ಕಾರ್ಡ್ ಆಧಾರದಲ್ಲಿ ನೆಲೆಯೂರಿರುವ ಸಾವಿರಾರು ಭಾರತೀಯ ಐ.ಟಿ ಉದ್ಯೋಗಿಗಳಿಗೆ ನೆರವಾಗಲಿದೆ.

ADVERTISEMENT

ಶಾಶ್ವತ ನಿವಾಸಿ ಕಾರ್ಡ್ ಎನ್ನಲಾಗುವ ಗ್ರೀನ್‌ ಕಾರ್ಡ್, ವಲಸಿಗ ವ್ಯಕ್ತಿಗೆ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವ ಹಕ್ಕು ಒದಗಿಸಲಿದೆ. ಸಂಸತ್ತಿನ ನ್ಯಾಯಾಂಗ ಸಮಿತಿ ಪ್ರಕಾರ, ಎರಡು ವರ್ಷಕ್ಕೂ ಹೆಚ್ಚು ಅವಧಿಯಿಂದ ನೆಲೆಸಿರುವ ಉದ್ಯೋಗ ಆಧರಿತ ವಲಸಿಗ ಅಭ್ಯರ್ಥಿಯು 5 ಸಾವಿರ ಡಾಲರ್ ಶುಲ್ಕ (ಸುಮಾರು ₹ 3.68 ಲಕ್ಷ) ಪಾವತಿಸುವ ಮೂಲಕ ಅನಿಯಮಿತ ಅವಧಿಗೆ ಶಾಶ್ವತವಾಗಿ ನೆಲೆಸುವ ಹಕ್ಕು ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.

ಇಬಿ–5 ವರ್ಗದ (ವಲಸಿಗ ಹೂಡಿಕೆದಾರ) ಅರ್ಜಿದಾರರಿಗೆ ಈ ಶುಲ್ಕದ ಮೊತ್ತ 50 ಸಾವಿರ ಡಾಲರ್ (ಸುಮಾರು ₹36.88 ಲಕ್ಷ) ಆಗಿರುತ್ತದೆ. ಅಮೆರಿಕ ನಾಗರಿಕ ಪ್ರಾಯೋಜಿಸುವ ಕುಟುಂಬ ಆಧರಿತ ವಲಸಿಗ ಅರ್ಜಿದಾರರಿಗೆ, ಗ್ರೀನ್‌ ಕಾರ್ಡ್ ಪಡೆಯಲು ಪಾವತಿಸಬೇಕಾದ ಶುಲ್ಕ 2500 ಡಾಲರ್‌ಗಳು (ಸುಮಾರು ₹ 1.84 ಲಕ್ಷ) ಎಂದು ಫೋರ್ಬ್ಸ್‌ ನಿಯತಕಾಲಿಕವು ವರದಿ ಮಾಡಿದೆ.

ನಿಗದಿತ ಅವಧಿ ಎರಡು ವರ್ಷವನ್ನು ಮೀರದಿರುವ ಆದರೆ, ಅಮೆರಿಕದಲ್ಲಿ ಅವರ ಉಪಸ್ಥಿತಿಯು ಅಗತ್ಯ ಎನ್ನಲಾದ ವ್ಯಕ್ತಿಗೆ ಶುಲ್ಕ 1500 ಡಾಲರ್‌ (ಸುಮಾರು ₹ 1.10 ಲಕ್ಷ) ಆಗಿರುತ್ತದೆ ಎಂದು ಸಮಿತಿಯು ತಿಳಿಸಿದೆ. ಸಂಸ್ಕರಣಾ ಶುಲ್ಕ ಹೊರತುಪಡಿಸಿ ಈ ಶುಲ್ಕವನ್ನು ಅರ್ಜಿದಾರರು ಪಾವತಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.