ADVERTISEMENT

ಧ್ವನಿವರ್ಧಕ ಬಳಕೆ ಧರ್ಮದ ಭಾಗವಲ್ಲ: ಬಾಂಬೆ ಹೈಕೋರ್ಟ್‌ನಿಂದ ಮಹತ್ವದ ತೀರ್ಪು

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 16:05 IST
Last Updated 24 ಜನವರಿ 2025, 16:05 IST
-
-   

ಮುಂಬೈ: ‘ಧ್ವನಿವರ್ಧಕಗಳ ಬಳಕೆ ಯಾವುದೇ ಧರ್ಮದ ಅಗತ್ಯ ಭಾಗವಲ್ಲ. ಧ್ವನಿವರ್ಧಕಗಳ ಬಳಕೆಗೆ ಅನುಮತಿ ನಿರಾಕರಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಸಮನಾಗುವುದಿಲ್ಲ’ ಎಂದು ಬಾಂಬೆ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಶಬ್ದ ಮಾಲಿನ್ಯ(ನಿರ್ವಹಣೆ ಮತ್ತು ನಿಯಂತ್ರಣ) ನಿಯಮಗಳು– 2000 ಹಾಗೂ ಮಹಾರಾಷ್ಟ್ರ ಪೊಲೀಸ್‌ ಕಾಯ್ದೆ ಮತ್ತು ಪರಿಸರ ಸಂರಕ್ಷಣೆ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುವ ಧ್ವನಿವರ್ಧಕಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ಹೈಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಅಜಯ್ ಗಡ್ಕರಿ ಹಾಗೂ ಶ್ಯಾಮ್ ಚಾಂಡಕ್ ಅವರು ಇದ್ದ ವಿಭಾಗೀಯ ಪೀಠ ನೀಡಿರುವ ಈ ತೀರ್ಪು ರಾಷ್ಟ್ರ ಮಟ್ಟದಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

ADVERTISEMENT

ಮುಂಬೈನ ಕುರ್ಲಾದ ಜಾಗೊ ನೆಹರೂನಗರ ರೆಸಿಡೆಂಟ್ಸ್‌ ವೆಲ್‌ಫೇರ್ ಅಸೋಸಿಯೇಶನ್ ಹಾಗೂ ಶಿವಸೃಷ್ಟಿ ಕೋ–ಆಪರೇಟಿವ್ ಹೌಸಿಂಗ್‌ ಸೊಸೈಟೀಸ್‌ ಅಸೋಸಿಯೇಸನ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆಯನ್ನು ವಿಭಾಗೀಯ ಪೀಠ ನಡೆಸಿದೆ.

ಹಲವು ಮಸೀದಿಗಳು ಹಾಗೂ ಮದರಸಾಗಳು, ಶಬ್ದ ಮಾಲಿನ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಇವುಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ಈ ಎರಡು ಸಂಘಟನೆಗಳು ಕೋರಿದ್ದವು.

ಮಹಾರಾಷ್ಟ್ರ ಸರ್ಕಾರ, ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮುಂಬೈ ಪೊಲೀಸ್‌ ಅನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.

ಚರ್ಚ್‌ ಆಫ್ ಗಾಡ್‌(ಫುಲ್‌ ಗಾಸ್ಪೆಲ್) ಇನ್ ಇಂಡಿಯಾ ವರ್ಸಸ್ ಕೆ.ಕೆ.ಆರ್‌ ಮೆಜೆಸ್ಟಿಕ್ ಕಾಲೊನಿ ವೆಲ್‌ಫೇರ್‌ ಅಸೋಸಿಯೇಶನ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ಪೀಠ, ‘ಇತರರ ಶಾಂತಿಗೆ ಭಂಗ ತರುವ ಮೂಲಕ ಪ್ರಾರ್ಥನೆ ಸಲ್ಲಿಸಬೇಕು ಎಂದು ಯಾವ ಧರ್ಮವೂ ಬೋಧನೆ ಮಾಡುವುದಿಲ್ಲ ಎಂಬುದು ನಿರ್ವಿವಿವಾದ. ಇನ್ನೊಂದೆಡೆ, ಜೋರಾದ ಧ್ವನಿಯಲ್ಲಿ ಇಲ್ಲವೇ ಡ್ರಮ್‌ಗಳನ್ನು ಬಾರಿಸುವ ಮೂಲಕ ಪ್ರಾರ್ಥನೆ ಸಲ್ಲಿಸುವಂತೆ ಯಾವ ಧರ್ಮವೂ ಉಪದೇಶ ಮಾಡುವುದಿಲ್ಲ’ ಎಂದು ಹೇಳಿದೆ.

ಹೈಕೋರ್ಟ್‌ ತೀರ್ಪಿನ ಪ್ರಮುಖಾಂಶಗಳು

  • ಹಲವು ಆಯಾಮಗಳಿಂದ ನೋಡಿದಾಗ ಶಬ್ದವು ಕೂಡ ಆರೋಗ್ಯಕ್ಕೆ ಅಪಾಯ ಒಡ್ಡಬಲ್ಲ ಪ್ರಮುಖ ಅಂಶ. ಯಾವುದೇ ವ್ಯಕ್ತಿಗೆ ಧ್ವನಿವರ್ಧಕ ಬಳಕೆಗೆ ಅನುಮತಿ ನೀಡದಿದ್ದಾಗ ತನ್ನ ಹಕ್ಕುಗಳಿಗೆ ಚ್ಯುತಿ ಬಂದಿದೆ ಎಂದು ಆ ವ್ಯಕ್ತಿ ಹೇಳುವಂತಿಲ್ಲ.

  • ಸಾರ್ವಜನಿಕ ಹಿತದೃಷ್ಟಿಯಿಂದ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಬಾರದು.

  • ಧ್ವನಿವರ್ಧಕಗಳ ಬಳಕೆಗೆ ಅನುಮತಿ ನಿರಾಕರಿಸುವುದು ಸಂವಿಧಾನದ 19 ಅಥವಾ 25ನೇ ವಿಧಿಯ ಉಲ್ಲಂಘನೆ ಆಗುವುದಿಲ್ಲ.

  • ನಾಗರಿಕ ಸಮಾಜವೊಂದರಲ್ಲಿ ಧರ್ಮದ ಹೆಸರಿನಲ್ಲಿ ಅಥವಾ ಇತರ ಚಟುವಟಿಕೆಗಳ ಮೂಲಕ ವಯೋವೃದ್ಧರು ರೋಗಿಗಳು ವಿದ್ಯಾರ್ಥಿಗಳು ಅಥವಾ ಮಕ್ಕಳ ಸುಖನಿದ್ರೆಗೆ ಭಂಗ ತರುವುದಕ್ಕೆ ಅನುಮತಿ ನೀಡಲಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.