ADVERTISEMENT

ಉತ್ತರ ಪ್ರದೇಶ: ಭೀತಿ ಸೃಷ್ಟಿಸಿದ ‘ಡ್ರೋನ್‌ ಚೋರ’ರ ವದಂತಿ

ಗ್ರಾಮಕ್ಕೆ ಗಸ್ತು ಕಾವಲುಗಾರನ ನೇಮಕ

ಪಿಟಿಐ
Published 10 ಆಗಸ್ಟ್ 2025, 15:33 IST
Last Updated 10 ಆಗಸ್ಟ್ 2025, 15:33 IST
   

ಲಖನೌ: ಉತ್ತರ ಪ್ರದೇಶದಲ್ಲಿ ಡ್ರೋನ್‌ ಬಳಸಿ ಕಳ್ಳತನ ನಡೆಸಲಾಗುತ್ತಿದೆ ಎಂಬ ವರದಿ ಹರಡಿದೆ. ರಾಜ್ಯದ ಪಶ್ಚಿಮ ಭಾಗದ ಸುಮಾರು 12 ಜಿಲ್ಲೆಗಳ 300ಕ್ಕೂ ಅಧಿಕ ಗ್ರಾಮಗಳಲ್ಲಿ ಜನರು ‘ಡ್ರೋನ್‌ ಚೋರ’ರ ಬಗ್ಗೆ ಆತಂಕಗೊಂಡಿದ್ದಾರೆ.

ರಾತ್ರಿ ಗ್ರಾಮಗಳಿಗೆ ಬಂದು ಡ್ರೋನ್‌ ಮೂಲಕ ದರೋಡೆ ನಡೆಸುತ್ತಾರೆ. ಕತ್ತಲಾದ ಬಳಿಕ ಗ್ರಾಮದ ಮೇಲೆ ಅನುಮಾನಾಸ್ಪದ ಡ್ರೋನ್‌ಗಳು ಹಾರಾಟ ನಡೆಸುತ್ತವೆ ಎಂದು ಗ್ರಾಮಸ್ಥರು ಭಯಗೊಂಡಿದ್ದಾರೆ.

‘ಡ್ರೋನ್‌ ಬಳಸಿ ಯಾವುದೇ ಕಳ್ಳತನ ಈವರೆಗೆ ವರದಿಯಾಗಿಲ್ಲ. ‌ಇದು ಕೇವಲ ವದಂತಿಯಾಗಿದೆ’ ಎಂದು ಪೊಲೀಸ್‌ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 

ADVERTISEMENT

‘ಅಮ್ರೋಹಾದಲ್ಲಿ ಮೂವರು ಯೂಟ್ಯೂಬರ್‌ಗಳು ಅನುಮತಿ ಇಲ್ಲದೇ ಡ್ರೋನ್‌ ಹಾರಾಟ ನಡೆಸಿದ್ದರು. ಹೀಗಾಗಿ ಅವರನ್ನು ಬಂಧಿಸಿ‌, ವಿಚಾರಣೆ ನಡೆಸಿದ ಬಳಿಕ ಬಿಡುಗಡೆ ಮಾಡಲಾಯಿತು. ಈ ಘಟನೆ ಸ್ಥಳೀಯರಲ್ಲಿ ಅನುಮಾನಕ್ಕೆ ಕಾರಣವಾಯಿತು. ನಂತರ ವದಂತಿ ಹಬ್ಬಿದೆ’ ಎಂದು ಡಿಐಜಿ ನೈಥಾನಿ ಅವರು ಮಾಹಿತಿ ನೀಡಿದರು. 

ಕಾನೂನು ಮತ್ತು ಸುವ್ಯವಸ್ಥೆ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾ‍ಪಿಸಲಾಯಿತು. ‘ವದಂತಿಗಳನ್ನು ಹರಡುವವರ ಮತ್ತು ಅನುಮತಿ ಇಲ್ಲದೆ ಡ್ರೋನ್‌ಗಳನ್ನು ಹಾರಿಸುವವರ ವಿರುದ್ಧ ‘ಗ್ಯಾಂಗ್‌ಸ್ಟರ್‌’ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು. 

ದರೋಡೆಕೋರರ ಭಯದಿಂದಾಗಿ ಪಿಲಿಭಿತ್‌ ಜಿಲ್ಲೆಯ ಪುರಾ‌ನಪುರ‌ ಗ್ರಾಮಸ್ಥರು ಗಸ್ತು ಕಾವಲುಗಾರರನ್ನು ನೇಮಿಸಿಕೊಂಡಿದ್ದಾರೆ. 45 ವರ್ಷದ ಭುರೆಯ್ ಸಿಂಗ್‌ ಅವರು ತಮ್ಮ ಸೈಕಲ್‌ಗೆ ಬ್ಯಾಟರಿ ಕಟ್ಟಿಕೊಂಡು, ಕೈಯಲ್ಲೊಂದು ದಪ್ಪ ಕೋಲು ಹಿಡಿದು ರಾತ್ರಿಯೆಲ್ಲ ಊರಿನ ಕಾವಲು ಕಾಯುತ್ತಿದ್ದಾರೆ. 

‘ಡ್ರೋನ್‌ ಬಳಸಿ ಕಳ್ಳತನ ಮಾಡುತ್ತಿರುವುದು ನಿಜವೇ ಅಥವಾ ಸುಳ್ಳೇ ಎಂಬುದು ಗೊತ್ತಿಲ್ಲ. ಆದರೆ ಹಗುರವಾಗಿ ತೆಗೆದುಕೊಳ್ಳಲಾಗುವುದಿಲ್ಲ’ ಎಂದು ಭುರೆಯ್‌ ಹೇಳಿದರು. 

ಪ್ರಕರಣ ಸಂಬಂಧ ಪೊಲೀಸರು ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದಾರೆ. ಸುಳ್ಳು ಸುದ್ದಿ ಹರಡಿದ ಹಾಗೂ ಭಯವನ್ನು ಪ್ರಚೋದಿಸಿದ ಆರೋಪದ ಮೇಲೆ 40 ಮಂದಿಯನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.