ADVERTISEMENT

UP Elections: ಪ್ರಿಯಾಂಕಾ ಮೌರ್ಯ, ಮುಲಾಯಂ ಸಂಬಂಧಿ ಬಿಜೆಪಿಗೆ

ಕಾಂಗ್ರೆಸ್ ತೊರೆದ ‘ಲಡಕೀ ಹೂಂ, ಲಡ್‌ ಸಕತೀ ಹೂಂ’ ಅಭಿಯಾನದ ಪೋಸ್ಟರ್‌ ಗರ್ಲ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 17:28 IST
Last Updated 20 ಜನವರಿ 2022, 17:28 IST
ಬಿಜೆಪಿ ಸೇರಿದ ಪ್ರಮೋದ್ ಗುಪ್ತಾ (ಎಡಬದಿ) ಮತ್ತು ಪ್ರಿಯಾಂಕಾ ಮೌರ್ಯ ಅವರು ಪಕ್ಷದ ನಾಯಕ ಲಕ್ಷ್ಮೀಕಾಂತ್ ಬಾಜಪೈ ಅವರ ಜತೆಗೆ ಗೆಲುವಿನ ಸಂಜ್ಞೆ ತೋರಿದರು –ಪಿಟಿಐ ಚಿತ್ರ
ಬಿಜೆಪಿ ಸೇರಿದ ಪ್ರಮೋದ್ ಗುಪ್ತಾ (ಎಡಬದಿ) ಮತ್ತು ಪ್ರಿಯಾಂಕಾ ಮೌರ್ಯ ಅವರು ಪಕ್ಷದ ನಾಯಕ ಲಕ್ಷ್ಮೀಕಾಂತ್ ಬಾಜಪೈ ಅವರ ಜತೆಗೆ ಗೆಲುವಿನ ಸಂಜ್ಞೆ ತೋರಿದರು –ಪಿಟಿಐ ಚಿತ್ರ   

ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕರು ಮತ್ತು ಸಚಿವರು ಪಕ್ಷ ತೊರೆದು ಸಮಾಜವಾದಿ ಪಕ್ಷ ಸೇರುತ್ತಿದ್ದರೆ, ಇನ್ನೊಂದೆಡೆ ವಿರೊಧ ಪಕ್ಷಗಳ ಪ್ರಮುಖರನ್ನೇ ತನ್ನತ್ತ ಬಿಜೆಪಿ ಸೆಳೆಯುತ್ತಿದೆ. ಕಾಂಗ್ರೆಸ್‌ನ ಅತ್ಯಂತ ಮಹತ್ವಾಕಾಂಕ್ಷಿ ‘ಲಡಕೀ ಹೂಂ, ಲಡ್‌ ಸಕತೀ ಹೂಂ’ (ಹುಡುಗಿ, ಹೋರಾಡಬಲ್ಲೆ) ಅಭಿಯಾನದ ಪೋಸ್ಟರ್‌ ಗರ್ಲ್ ಆಗಿದ್ದ ಪ್ರಿಯಾಂಕಾ ಮೌರ್ಯಾ ಅವರು ಗುರುವಾರ ಬಿಜೆಪಿ ಸೇರಿದ್ದಾರೆ. ಸಮಾಜವಾದಿ ಪಕ್ಷದ ಮಾಜಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸಂಬಂಧಿ ಮತ್ತು ಪಕ್ಷದ ಶಾಸಕ ಪ್ರಮೋದ್ ಗುಪ್ತಾ ಅವರು ಸಹ ಬಿಜೆಪಿ ಸೇರಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ಆರಂಭಿಸಲಾಗಿರುವ ಲಡಕೀ ಹೂಂ, ಲಡ್‌ ಸಕತೀ ಹೂಂ ಅಭಿಯಾನದ ಮುಂಚೂಣಿಯ ರೂವಾರಿಗಳಲ್ಲಿ ಪ್ರಿಯಾಂಕಾ ಮೌರ್ಯ ಒಬ್ಬರಾಗಿದ್ದರು. ಈ ಅಭಿಯಾನದ ಅಡಿ ನಡೆಸಲಾದ ಮ್ಯಾರಾಥಾನ್, ಶಕ್ತಿ ಸಂವಾದದ ಪೋಸ್ಟರ್‌ ಮತ್ತು ಹೋರ್ಡಿಂಗ್‌ಗಳಲ್ಲಿ ಮೌರ್ಯ ಅವರ ಚಿತ್ರವನ್ನು ಬಳಸಿಕೊಳ್ಳಲಾಗಿತ್ತು.ಈಗ, ‘ಪಕ್ಷವು ತನಗೆ ಟಿಕೆಟ್ ನೀಡಿಲ್ಲ’ ಎಂದು ಹೇಳಿರುವ ಅವರು, ಬಿಜೆಪಿ ಸೇರಿದ್ದಾರೆ.

‘ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೆ. ಆದರೆ ಟಿಕೆಟ್‌ಗಾಗಿ ಲಂಚ ನೀಡಲು ನನ್ನ ಬಳಿ ಹಣ ಇರಲಿಲ್ಲ. ಹೀಗಾಗಿ ನನಗೆ ಟಿಕೆಟ್ ದೊರೆಯಲಿಲ್ಲ. ಆದರೆ ಒಂದು ತಿಂಗಳ ಹಿಂದಷ್ಟೇ ಪಕ್ಷ ಸೇರಿದ್ದವರಿಗೆ ಟಿಕೆಟ್ ನೀಡಲಾಗಿದೆ. ಇವೆಲ್ಲವೂ ಪೂರ್ವನಿರ್ಧರಿತ. ಈ ಕಾರಣದಿಂದಲೇ ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಮಹಿಳೆಯರನ್ನೇ ಕೇಂದ್ರವಾಗಿರಿಸಿಕೊಂಡು ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್‌ಗೆ ಈ ಬೆಳವಣಿಗೆಯಿಂದ ತೀವ್ರ ಹಿನ್ನಡೆಯಾಗಲಿದೆ ಎಂದು ಬಿಜೆಪಿಯ ಕೆಲವು ನಾಯಕರು ಹೇಳಿದ್ದಾರೆ.

ಮುಲಾಯಂ ದೂರದ ಸಂಬಂಧಿ: ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸೇರಿದ ಸಮಾಜವಾದಿ ಪಕ್ಷದ ಶಾಸಕ ಪ್ರಮೋದ್ ಗುಪ್ತಾ ಅವರು ಮುಲಾಯಂ ಸಿಂಗ್ ಅವರ ದೂರದ ಸಂಬಂಧಿ. ಅವರು ಪಕ್ಷ ತೊರೆದು ಬಿಜೆಪಿ ಸೇರಿರುವುದರಿಂದ ಈ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಬಿಜೆಪಿಯ ನಾಯಕರು ಹೇಳಿದ್ದಾರೆ. ಮುಲಾಯಂ ಕುಟುಂಬದಿಂದ ಬಿಜೆಪಿ ಸೇರುತ್ತಿರುವ ಎರಡನೇ ವ್ಯಕ್ತಿ ಇವರಾಗಿದ್ದಾರೆ. ಇದಕ್ಕೂ ಮುನ್ನ ಮುಲಾಯಂ ಸಿಂಗ್ ಅವರ ಕಿರಿಯ ಮಗನ ಪತ್ನಿ ಅಪರ್ಣಾ ಯಾದವ್ ಅವರು ಬಿಜೆಪಿ ಸೇರಿದ್ದರು. ಹಿಂದುಳಿದ ವರ್ಗಗಳ ನಾಯಕರನ್ನು ಸಮಾಜವಾದಿ ಪಕ್ಷಕ್ಕೆ ಸೇರಿಸಿಕೊಂಡು, ಬಿಜೆಪಿಯನ್ನು ದುರ್ಬಲ ಮಾಡಲು ಅಖಿಲೇಶ್ ಯತ್ನಿಸಿದ್ದರು. ಈಗ ಅವರ ಕುಟುಂಬದವರನ್ನೇ ಬಿಜೆಪಿ ತನ್ನತ್ತ ಸೆಳೆಯುತ್ತಿದೆ. ಈ ಮೂಲಕ ಸಮಾಜವಾದಿ ಪಕ್ಷದ ತಂತ್ರವನ್ನು ದುರ್ಬಲಗೊಳಿಸುತ್ತಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

‘ಪಕ್ಷಕ್ಕೆ ನಷ್ಟವಿಲ್ಲ’

‘ಪ್ರಿಯಾಂಕಾ ಮೌರ್ಯ ಅವರು ಕಾಂಗ್ರೆಸ್‌ ಅಭಿಯಾನದ ಮುಂಚೂಣಿಯ ರೂವಾರಿಯಾಗಿರಲಿಲ್ಲ. ಅಭಿಯಾನದ ಪೋಸ್ಟರ್‌ಗೆ ಚಿತ್ರ ನೀಡಿದ ಹಲವರಲ್ಲಿ ಅವರೂ ಒಬ್ಬರು. ಅವರು ಈ ಅಭಿಯಾನದ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡರು. ಇದಕ್ಕಾಗಿ ಅವರು ಕಾಂಗ್ರೆಸ್‌ಗೆ ಕೃತಜ್ಞತೆ ಹೇಳಬೇಕು’ ಎಂದು ಅಖಿಲ ಭಾರತ ಕಾಂಗ್ರೆಸ್‌ ಮಹಿಳಾ ಮೋರ್ಚಾದ ಕಾರ್ಯಕಾರಿ ಅಧ್ಯಕ್ಷೆ ಎನ್‌.ಡಿಸೋಜಾ ಅವರು ಹೇಳಿದ್ದಾರೆ.

‘ಪ್ರಿಯಾಂಕಾ ಮೌರ್ಯ ಅವರು ಕಾಂಗ್ರೆಸ್‌ನ ಈ ವೇದಿಕೆಯನ್ನು ಬಳಸಿಕೊಂಡರು. ಕೆಲವೇ ದಿನಗಳಲ್ಲಿ ತಮ್ಮ ರಾಜಕೀಯ ನಿಲುವನ್ನೂ ಬದಲಿಸಿಕೊಂಡರು. ಈಗ ಬಿಜೆಪಿ ಸೇರಿದ್ದಾರೆ. ಇದರಿಂದ ಕಾಂಗ್ರೆಸ್‌ನ ಹೋರಾಟದ ಮೇಲೆ ಹೆಚ್ಚಿನ ಪರಿಣಾಮವೇನೂ ಆಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ಬಿಜೆಪಿಗೆ ಧನ್ಯವಾದಗಳು’

ನಮ್ಮ ಕುಟುಂಬದವರನ್ನು ಸೇರಿಸಿಕೊಳ್ಳುತ್ತಿರುವ ಬಿಜೆಪಿಗೆ ಧನ್ಯವಾದ ಹೇಳಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ.

‘ನಾವು ಕುಟುಂಬ ರಾಜಕಾರಣ ಮಾಡುತ್ತಿದ್ದೇವೆ, ಕುಟುಂಬದವರನ್ನೇ ರಾಜಕೀಯಕ್ಕೆ ತರುತ್ತಿದ್ದೇವೆ ಎಂದು ಬಿಜೆಪಿ ಸದಾ ನಮ್ಮ ಮೇಲೆ ಆರೋಪ ಮಾಡುತ್ತಿತ್ತು. ಈಗ ನಮ್ಮ ಕುಟುಂಬದವರನ್ನು ಬಿಜೆಪಿ ಸೇರಿಸಿಕೊಳ್ಳುತ್ತಿದೆ. ಈ ಮೂಲಕ
ನಮ್ಮ ಮೇಲಿದ್ದ ಆರೋಪವನ್ನು ಬಿಜೆಪಿಯೇ ಇಲ್ಲವಾಗಿಸುತ್ತಿದೆ. ಈ ಸಂಬಂಧ ನನ್ನ ಮೇಲಿದ್ದ ಒತ್ತಡವನ್ನು ಬಿಜೆಪಿ ಕಡಿಮೆ ಮಾಡಿದೆ’ ಎಂದು ಅಖಿಲೇಶ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.