ADVERTISEMENT

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಐದನೇ ಹಂತ: 692 ಅಭ್ಯರ್ಥಿಗಳು ಕಣದಲ್ಲಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2022, 21:49 IST
Last Updated 26 ಫೆಬ್ರುವರಿ 2022, 21:49 IST
ಮತದಾನಕ್ಕೆ ಇವಿಎಂಗಳ ಸಿದ್ಧತೆ
ಮತದಾನಕ್ಕೆ ಇವಿಎಂಗಳ ಸಿದ್ಧತೆ   

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಐದನೇ ಹಂತದ ಮತದಾನ ಭಾನುವಾರ ನಡೆಯಲಿದೆ. ವಿವಿಧ ಪಕ್ಷಗಳ 692 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಐದನೇ ಹಂತದ ಮತದಾನದ ಪ್ರಚಾರ ಶುಕ್ರವಾರ ಸಂಜೆಗೆ ಮುಕ್ತಾಯವಾಗಿದೆ. ಎಲ್ಲಾ ಅಗತ್ಯ ತಯಾರಿಗಳೂ ಸಂಪೂರ್ಣವಾಗಿವೆ ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಅಜಯ್‌ ಕುಮಾರ್‌ ಶುಕ್ಲಾ ಅವರು ಶನಿವಾರ ಹೇಳಿದರು.

ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭವಾಗಲಿದೆ ಮತ್ತು ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ ಎಂದು ಅವರು ತಿಳಿಸಿದರು.

ADVERTISEMENT

ಸುಲ್ತಾನ್‌ಪುರ, ಚಿತ್ರಕೂಟ, ಪ್ರತಾಪ್‌ಗಡ, ಕೌಶಂಬಿ, ಪ್ರಯಾಗರಾಜ್‌, ಬಹರೈಚ್‌,ಬಾರಾಬಂಕಿ, ಶ್ರಾವಸ್ತಿ, ಗೊಂಡ, ಅಮೇಠಿ, ರಾಯಬರೇಲಿ ಮತ್ತು ಅಯೋಧ್ಯೆ ಜಿಲ್ಲೆಗಳಸುಮಾರು 2.24 ಕೋಟಿ ಮತದಾರರುಐದನೇ ಹಂತದಲ್ಲಿ ಮತ ಚಲಾಯಿಸಲಿದ್ದಾರೆ.

ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ, ಸಚಿವರಾದ ಸಿದ್ಧಾರ್ಥ್‌ ನಾಥ್‌ ಸಿಂಗ್‌, ರಾಜೇಂದ್ರ ಸಿಂಗ್‌, ನಂದ ಗೋಪಾಲ್‌ ಗುಪ್ತಾ, ಅಪ್ನಾ ದಳ (ಕೆ) ಅಧ್ಯಕ್ಷೆ ಕೃಷ್ಣಾ ಪಟೇಲ್‌, ಕಾಂಗ್ರೆಸ್‌ ನಾಯಕಿ ಆರಾಧನಾ ಮಿಶ್ರಾ ಮೋನ ಕಣದಲ್ಲಿರುವ ಕೆಲವು ಪ್ರಮುಖ ನಾಯಕರು.

ಐದನೇ ಹಂತದ ಚುನಾವಣೆ ಮುಗಿದರೆ, ಉತ್ತರ ಪ್ರದೇಶದ ಒಟ್ಟು 403 ವಿಧಾನಸಭೆ ಕ್ಷೇತ್ರಗಳಲ್ಲಿ 292 ಕ್ಷೇತ್ರಗಳಿಗೆ ಮತದಾನ ನಡೆದಂತಾಗುತ್ತದೆ. ಮಾ.3 ಮತ್ತು 7ರಂದು ಆರು ಮತ್ತು ಏಳನೇ ಹಂತದ ಮತದಾನ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿ ಬಿಜೆಪಿಯ ಹಲವು ಪ್ರಮುಖ ನಾಯಕರು ಬಿಜೆಪಿ ಪರವಾಗಿ ಬಿರುಸಿನ ಪ್ರಚಾರ ಮಾಡಿದ್ದಾರೆ.

ಬಿಜೆಪಿ ಎದುರಾಳಿ ಪಕ್ಷಗಳಾದ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್‌ನ ಪ್ರಮುಖರು ಕೂಡಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಲೋಕಸಭೆ ಕ್ಷೇತ್ರ ರಾಯಬರೇಲಿಯಲ್ಲಿ ವರ್ಚುವಲ್‌ ರ‍್ಯಾಲಿ ನಡೆಸಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿಕೊಂಡಿದ್ದ ರಾಯಬರೇಲಿ, ಅಮೇಠಿ ಮತ್ತು ರಾಮ ಜನ್ಮಭೂಮಿ ವಿವಾದದ ಕೇಂದ್ರಬಿಂದು ಅಯೋಧ್ಯಾದಲ್ಲಿನ ಸ್ಫರ್ಧೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

12

ಜಿಲ್ಲೆಗಳಲ್ಲಿ ಮತದಾನ

61

ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ

2.24 ಕೋಟಿ

5ನೇ ಹಂತದಲ್ಲಿ ಮತದಾನದ ಹಕ್ಕಿರುವ ಒಟ್ಟು ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.