ADVERTISEMENT

ಅಯೋಧ್ಯೆ ವಿಷಯ ಹೊಂದಿರುವ ಪುಸ್ತಕ ಖರೀದಿಗೆ ಮೀರತ್ ವಿ.ವಿ ಶಿಫಾರಸು: ವಿವಾದ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 23 ಮೇ 2022, 16:10 IST
Last Updated 23 ಮೇ 2022, 16:10 IST
ಅಯೋಧ್ಯ ನಗರಿ  –ರಾಯಿಟರ್ಸ್ ಚಿತ್ರ
ಅಯೋಧ್ಯ ನಗರಿ –ರಾಯಿಟರ್ಸ್ ಚಿತ್ರ   

ಲಖನೌ: ಉತ್ತರ ಪ್ರದೇಶದ ಮೀರತ್ ಪಟ್ಟಣದಲ್ಲಿರುವ ಸರ್ಕಾರಿ ಸ್ವಾಮ್ಯದ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯವು ಅಯೋಧ್ಯೆ ಕುರಿತ ವಿಷಯದ ಪುಸ್ತಕವನ್ನು ಅಧ್ಯಯನಕ್ಕೆ ಅಳವಡಿಸಲು ಸಂಯೋಜಿತವಾಗಿರುವ ಕಾಲೇಜುಗಳಿಗೆ ಶಿಫಾರಸು ಮಾಡಿದ್ದು ವಿವಾದ ಸೃಷ್ಟಿಸಿದೆ.

ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿರುವ ಕಾಲೇಜುಗಳಿಗೆ ಹಾಗೂ ಇತರ ಸಸಂಸ್ಥೆಗಳ ಮುಖ್ಯಸ್ಥರಿಗೆ ರಿಜಿಸ್ಟ್ರಾರ್ ಧೀರೇಂದ್ರ ಕುಮಾರ್ ವರ್ಮಾ ಅವರು ಯತೀಂದ್ರ ಮಿಶ್ರಾ ಅವರು ಬರೆದಿರುವ ‘ಅಯೋಧ್ಯೆ- ಪರಂಪರಾ, ಸಂಸ್ಕೃತಿ, ವಿರಾಸತ್’ ಎಂಬ ಪುಸ್ತಕವನ್ನು ಖರೀದಿಸಲು ಪರಿಗಣಿಸುವಂತೆ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

‘ಹಿಂದಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪುಸ್ತಕ ಲಭ್ಯವಿದೆ. ಅಪರೂಪದ ಚಿತ್ರಗಳ ಸಂಗ್ರಹವನ್ನು ಒಳಗೊಂಡಿದೆ. ಕಾಲೇಜುಗಳಿಗೆ ಇದು ತುಂಬಾ ಉಪಯುಕ್ತವಾಗಲಿದ್ದು, ಪುಸ್ತಕವನ್ನು ಖರೀದಿಸುವಬಗ್ಗೆ ಯೋಚಿಸಿ’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ADVERTISEMENT

ವಿಶ್ವವಿದ್ಯಾಲಯವು ಮಾನ್ಯತೆ ಪಡೆದಿರುವ ಕಾಲೇಜುಗಳಲ್ಲಿ ಬೋಧನೆಗಾಗಿ ಪುಸ್ತಕವನ್ನು ಶಿಫಾರಸು ಮಾಡುವ ಬಗ್ಗೆಯೂ ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಮೀರತ್ ವಿಶ್ವವಿದ್ಯಾಲಯ ಎಂದೂ ಕರೆಯಲ್ಪಡುವ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯವು ಉತ್ತರ ಪ್ರದೇಶದ ಪಶ್ಚಿಮ ಭಾಗದ ಜಿಲ್ಲೆಗಳಲ್ಲಿ ನೂರಾರು ಸಂಯೋಜಿತ ಕಾಲೇಜುಗಳನ್ನು ಹೊಂದಿದೆ.

ಪುಸ್ತಕಗಳನ್ನು ಖರೀದಿಸಲು ಕಾಲೇಜುಗಳಿಗೆ ಹೇಳಿದ್ದಕ್ಕಾಗಿ ವಿರೋಧ ಪಕ್ಷಗಳು ವಿಶ್ವವಿದ್ಯಾಲಯವನ್ನು ತರಾಟೆಗೆ ತೆಗೆದುಕೊಂಡಿವೆ. ‘ಉನ್ನತ ಶಿಕ್ಷಣದ ಕೇಂದ್ರವಾಗಿರುವ ವಿಶ್ವವಿದ್ಯಾಲಯವು ಧಾರ್ಮಿಕ ಪುಸ್ತಕವನ್ನು ಪ್ರಚಾರ ಮಾಡಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

‘ಆರ್‌ಎಸ್‌ಎಸ್ ಕಾರ್ಯಕರ್ತರನ್ನು ವಿಶ್ವವಿದ್ಯಾಲಯಗಳ ಕುಲಪತಿಗಳಾಗಿ ನೇಮಿಸಿದರೆ ಪರಿಸ್ಥಿತಿ ಹೀಗಾಗುತ್ತದೆ’ ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.

ಆದರೆ, ವರ್ಮಾ ಅವರು ಆರೋಪಗಳನ್ನು ತಿರಸ್ಕರಿಸಿದ್ದು, ‘ಪುಸ್ತಕವನ್ನು ಖರೀದಿಸುವ ಬಗ್ಗೆ ಪರಿಗಣಿಸಲು ವಿಶ್ವವಿದ್ಯಾಲಯವು ಕೇಳಿದೆ. ನಾವು ಅದನ್ನು ಖರೀದಿಸಲು ಪರಿಗಣಿಸಬೇಕು ಎಂದು ಕಾಲೇಜುಗಳಿಗೆ ಮಾತ್ರ ವಿನಂತಿಸಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.